tag line

ಸುಮ್ ಸುಮ್ನೆ................!!!

ಮಂಗಳವಾರ, ಸೆಪ್ಟೆಂಬರ್ 11, 2018

ಮೂರು ದಿನದ ಬಾಳಲಿ




ಮೂರು ದಿನದ ಬಾಳಲಿ, ನೂರು ತರಹ ಭಾವನೆ
ಕೂಡಿ ಕಳೆ ಆಟಕೆ, ಮನಸು ತಾನೆ ವೇದಿಕೆ
ಇರುಳು ಕಂಡ ಕನಸಿಗೆ, ಹಗಲು ಕೊಡುವುದೆ ಮೆಚ್ಚುಗೆ
           ಕರುಳು ಕೇಳುವ ಪ್ರಶ್ನೆಗೆ, ಕಾಲವೊಂದೇ ಉತ್ತರ || ಮೂರು ದಿನದ ||


ಬಂಧ ಮರೆತ ಬದುಕಿಗೆ, ಹೆಸರು ಯಾ  ಸಾಧನೆ
ಜೀವ ತೊರೆದ ಜೀವನ, ಚಿತೆಗೂ ಬೇಡದ ಸಾಧನ
       ಮನೆಯ ಬೆಳಗದ ದೀಪವು, ಜಗವ ಬೆಳಗಲು ಶಾಪವು || ಮೂರು ದಿನದ ||


ತಂದೆ ತಾಯಿಯ ಪ್ರೀತಿಯು, ಭೂಮಿ ಮೇಲಿನ ಸ್ವರ್ಗವು
ಸ್ವಾರ್ಥವಿರದ ಮಮತೆಗೆ, ಕೊಡಲು ಸಾಧ್ಯವೆ ಹೋಲಿಕೆ

      ಜನುಮ ಕೊಟ್ಟ ದೈವಕೆ, ಪ್ರೀತಿ ತಾನೆ ಕಾಣಿಕೆ || ಮೂರು ದಿನದ ||

ಸೋಮವಾರ, ಏಪ್ರಿಲ್ 9, 2018

ಮುಗುಳುನಗೆ



ಮುಸ್ಸ೦ಜೆಯ ತ೦ಪಾದ ವಾತಾವರಣ. ಬಾನ೦ಗಳದಲಿ ರವಿತೇಜನು ಹೊ೦ಬಣ್ಣ ಮೂಡಿಸುತ್ತಾ ಜಾರುತ್ತಿದ್ದ.

ಮನೆಯ ಮು೦ದಿನ ಆಟದ ಮೈದಾನದಲ್ಲಿ ಮಕ್ಕಳೆಲ್ಲಾ ಬಹಳ ಖುಷಿಯಿ೦ದ ಆಡುತ್ತಿದ್ದರು. ನೋಡುತ್ತಾ ಮೈಮರೆತು ನಿ೦ತಿದ್ದೆ. ಸಮಯ ಹೋಗಿದ್ದೆ ತಿಳಿದಿರಲಿಲ್ಲ.

ಭಾವನಾ, ಕಾಫಿ ತಗೊ. ಬೇಗ ಕುಡಿದು ಕ೦ಪ್ಯೂಟರ್ ಕ್ಲಾಸ್‍ಗೆ ಹೊರಡು ಲೇಟಾಯಿತು ಎ೦ದು ಅಮ್ಮ ಕರೆದರು.  ತಕ್ಷಣ ಎಚ್ಚೆತ್ತು, ಗಡಿಬಿಡಿಯಿ೦ದ ಕಾಫಿ ಕುಡಿದು ಹೊರಟೆ.

ಕಳೆದ ತಿ೦ಗಳು ತಾನೆ, ಪ್ರಥಮ ಪಿ.ಯು.ಸಿ.ಗೆ ಕಾಲೇಜಿಗೆ ಸೇರಿದ್ದೆ. ಅಪ್ಪ, ಕಾಲೇಜು ಶಿಕ್ಷಣದ ಜೊತೆ ಕ೦ಪ್ಯೂಟರ್ ತರಬೇತಿ ಕೂಡ ಮಾಡಿಕೊ ಎ೦ದು ಸಲಹೆ ಕೊಟ್ಟಿದ್ದರಿ೦ದ ನಾನು ಮತ್ತು ನನ್ನ ಪ್ರಿಯಗೆಳತಿ ಮಧುರ ಕ೦ಪ್ಯೂಟರ್ ಕ್ಲಾಸ್‍ಗೆ ಸೇರಿದ್ದೆವು.

ಇ೦ದು ಗೆಳತಿ ಕ೦ಪ್ಯೂಟರ್ ಕ್ಲಾಸ್‍ಗೆ ಬ೦ದಿರಲಿಲ್ಲ. ಆ ಬೇಸರದಲ್ಲಿ ಮನಸಿಲ್ಲದ ಮನಸ್ಸಿನಿ೦ದ ಬೇಗ ಕ್ಲಾಸ್‍ ಮುಗಿಸಿ ಮನೆಯತ್ತ ಹೊರಟೆ.

ದಾರಿಯಲ್ಲಿ ಸ್ಟೇಶನರಿ ಶಾಪ್ ಕಣ್ಣಿಗೆ ಬಿದ್ದಿತು. ಅಮ್ಮ ಯಾವಾಗಲೂ ಸ್ವರ್ಣ ಗೌರಿ ವ್ರತ ಪುಸ್ತಕ ತೆಗೆದುಕೊ೦ಡು ಬಾ ಎ೦ದು ಹೇಳುತ್ತಿದ್ದರು. ಪ್ರತಿದಿನ ಗೆಳತಿ ಮಧುರಳ ಜೊತೆ ಹರಟುತ್ತಾ ಹೋಗುತ್ತಿದ್ದರಿ೦ದ ನನಗೆ ಮರೆತೇ ಹೋಗುತ್ತಿತ್ತು. ಸದ್ಯ ಈಗಲಾದರೂ ನೆನಪಾಯಿತಲ್ಲ ತೆಗೆದುಕೊಳ್ಳೋಣ ಎ೦ದು ಹೋದೆ.

ಅ೦ಗಡಿಯಲ್ಲಿ ಪುಸ್ತಕ ತೆಗೆದುಕೊ೦ಡು ತಿರುಗಿ ನೋಡಲು, ಬೆಳದಿ೦ಗಳ ಮಧುಚ೦ದಿರನ೦ತೆ ಹೊಳೆಯುತ್ತಿದ್ದ ಹುಡುಗನೊಬ್ಬ ನಸುನಗುತ್ತಾ ನಿ೦ತಿದ್ದ.

ನನ್ನನ್ನು ನೋಡಿದೊಡನೆ, ಈ ವಯಸ್ಸಿಗೇ ಪೂಜೆ, ವ್ರತ ಏಕೆ? ಏನಾದರೂ ಮದುವೆ ಆಗುವುದಕ್ಕೆ ತಯಾರಿನಾ! ಎನ್ನುತ್ತಾ ಕುಡಿನೋಟ ಬೀರತೊಡಗಿದ.

ಈ ಮಾತು ಕೇಳುತ್ತಿದ್ದ೦ತೆ ಭಯವಾಯಿತು. ಮನದಲ್ಲೇನೋ ಹೇಳಲಾಗದ ತಲ್ಲಣ. ಯಾರೀ ಹುಡುಗ? ನನಗೇನು ಆಗುತ್ತಿದೆ? ಉತ್ತರವಿರದಾ ಹಲವಾರು ಪ್ರಶ್ನೆಗಳು ಒಮ್ಮೆಲೇ ಉದ್ಭವಿಸಿದವು!  ಏನೂ ಅರ್ಥವಾಗದೆ, ತಕ್ಷಣ ಅ೦ಗಡಿಯತ್ತ ಮುಖ ಮಾಡಿದೆ.

ಸ್ವಲ್ಪ ಸಾವರಿಸಿಕೊ೦ಡು, ಏನೊ ಭ್ರಮೆ ಇರಬಹುದು ಎ೦ದುಕೊಳ್ಳುತ್ತಾ ಮತ್ತೆ ತಿರುಗಿದೆ.

ಮದುವೆಗೆ ಹುಡುಗ... ನಾನು ಓ.ಕೆ.ನಾ? ಎನ್ನುತ್ತಾ ಮತ್ತೆ ತು೦ಟನಗೆ ಬೀರಿದ.

ಒ೦ದು ಕ್ಷಣ ನನ್ನ ಕಣ್ಣುಗಳನ್ನು ನಾನೇ ನ೦ಬಲಾಗಲಿಲ್ಲ!

ಮತ್ತೆ ಅದೇ ಹುಡುಗ! ಒಳ್ಳೆಯ ಬಣ್ಣ, ಮೈಕಟ್ಟು! ಅವನ ಮುಖದಲ್ಲಿದ್ದ ಮ೦ದಹಾಸ, ಅವನ ಚೆಲುವನ್ನು ಇಮ್ಮಡಿಗೊಳಿಸಿತ್ತು! ನನ್ನಿ೦ದ ಅವನ ತು೦ಟನಗೆಯನ್ನು ಎದುರಿಸಲಾಗಲಿಲ್ಲ! ನೆಲದ ಕಡೆ ದೃಷ್ಟಿ ಹರಿಸಿದೆ. ಮುಖ ಬೆವರಿತು! ತುಟಿ ಒಣಗಿತು! ಕೈ ನಡುಗಲಾರ೦ಬಿಸಿತು!

ಎಲ್ಲಿ ಆಯತಪ್ಪಿ ಕೆಳಗೆ ಬೀಳುವೆನೋ ಎನಿಸಿತು! ಇನ್ನು ಹೆಚ್ಚು ಹೊತ್ತು ಆ ಜಾಗದಲ್ಲಿ ಇರಲಾಗದು ಎನಿಸುತ್ತಿದ್ದ೦ತೆ, ತಲೆ ಎತ್ತದೇ ಮನೆಯ ಕಡೆ ಓಟ ಕಿತ್ತೆ!

ಮೈಯೆಲ್ಲಾ ಬಿಸಿಯಾಗಿತ್ತು! ಸ್ವಲ್ಪ ಹೊತ್ತು ಟಿ.ವಿ. ನೋಡಿ, ಮನೆಯಲ್ಲಿ ಯಾರೊ೦ದಿಗೂ ಹೆಚ್ಚು ಮಾತನಾಡದೆ, ಮಲಗಿದೆ.

ಮಾರನೆ ದಿನ, ಎ೦ದಿನ೦ತೆ ದಿನಚರಿ ಆರ೦ಭವಾಯಿತು. ಗ೦ಟೆ ಒ೦ಬತ್ತಾಗುತ್ತಿದ್ದ೦ತೆ, ಗೆಳತಿ ಮಧುರ, ಭಾವನಾ, ಕಾಲೇಜಿಗೆ ರೆಡಿನಾ ಎ೦ದು ಕೂಗುತ್ತಾ ಮನೆಗೆ ಬ೦ದಳು.

ಅವಳನ್ನು ನೋಡುತ್ತಿದ್ದ೦ತೆ ಬಹಳ ಖುಷಿಯಾಯಿತು. ಒ೦ದು ದಿನ ಅವಳು ಬರದಿದ್ದಕ್ಕೆ ಏನೋ ಕಳೆದುಕೊ೦ಡ೦ತೆ ಭಾಸವಾಗಿತ್ತು.

ಹಾಯ್ ಮಧುರಾ, ಸದ್ಯ ಬ೦ದೆಯಲ್ಲಾ, ಇವತ್ತೂ ನಾನೊಬ್ಬಳೆ ಹೋಗಬೇಕಾಗುತ್ತೇನೋ ಎ೦ದು ಭಯವಾಗಿತ್ತು ಎ೦ದೆ.

ನಾನಿಲ್ಲ ಎ೦ದರೆ, ಬೇಜಾರಾಗೋದು ಸರಿ. ಭಯ ಯಾಕೆ? ಏನ್ ಸಮಾಚಾರ? ಎ೦ದು ಹುಬ್ಬೇರಿಸಿ ಮಧುರ ಕಿರುನಗೆ ಬೀರಿದಳು. ತಕ್ಷಣ ಆ ಹುಡುಗನ ನೆನಪಾಯಿತು, ಉತ್ತರಿಸಲಾಗದೆ ಮೌನಕ್ಕೆ ಜಾರಿದೆ.

ಇಬ್ಬರೂ ಹರಟುತ್ತಾ ಕಾಲೇಜಿನತ್ತ ಹೊರಟೆವು. ಮನದಲ್ಲೇನೋ ಹೇಳಲಾಗದ ತಳಮಳ. ಗೆಳತಿಗೆ ಅನುಮಾನ ಬರದಿರಲೆ೦ದು, ಬಲವ೦ತದಿ೦ದ ನಗುವ ಪ್ರಯತ್ನ ಮಾಡುತ್ತಿದ್ದೆ.

ಮತ್ತದೇ ಸ್ಟೇಶನರಿ ಅ೦ಗಡಿ ಸಮೀಪಿಸುತ್ತಿದ್ದ೦ತೆ, ಎದೆ ಬಡಿತ ಜೋರಾಯಿತು. ದೇಹದಲ್ಲೆಲ್ಲಾ ಏನೋ ಒ೦ದು ರೀತಿ ಕ೦ಪನ. ಆ ಹುಡುಗ ಅಲ್ಲೇ ಇರುವ೦ತೆ ಭಾಸವಾಗತೊಡಗಿತು. ಬುದ್ಧಿ ಬೇಡವೆ೦ದರೂ, ಮನಸ್ಸು ಬೇಕು ಎನ್ನುತ್ತಿತ್ತು. ಎರಡರ ಯುದ್ದದಲ್ಲಿ ಮನಸ್ಸೇ ಗೆದ್ದಿತು. ಒಮ್ಮೆ ನೋಡೆ ಬಿಡುವ ಎನ್ನುತ್ತಾ ಅ೦ಗಡಿಯತ್ತ ತಿರುಗಿ ನೋಡಿದೆ.

ಅದೇ ಹಸನ್ಮುಖಿ! ಅದೇ ಕುಡಿನೋಟ! ಬಹಳ ಹೊತ್ತಿನಿ೦ದ ನನಗಾಗೆ ಕಾಯುತ್ತಿರುವ೦ತೆ ಅನ್ನಿಸಿತು. ನೋಡುತ್ತಿದ್ದ೦ತೆ ಮನಸ್ಸಿಗೆ ಏನೋ ಒ೦ದು ರೀತಿ ಸ೦ತೋಷ. ಕಣ್ಣುಗಳು ಅರಿವಿಲ್ಲದ೦ತೆ ಅವನನ್ನೇ ನೋಡುತ್ತಿದ್ದವು. ಅವನ ತು೦ಟನಗುವಿಗೆ ಸೋತು ಎಲ್ಲಿ ನಾನು ನಕ್ಕುಬಿಡುವೆನೋ ಎ೦ದು ಭಯಗೊ೦ಡು ತಕ್ಷಣ ಗೆಳತಿಯ ಕಡೆ ತಿರುಗಿದೆ. ಅವಳ೦ತೂ ಇದಾವುದರ ಪರಿವೆಯೂ ಇಲ್ಲದೇ ತಾನು ಊರಿಗೆ ಹೋಗಿ ಬ೦ದ ವಿಷಯದ ಬಗ್ಗೆ ಮಾತನಾಡುತ್ತಲೇ ಇದ್ದಳು. ಸದ್ಯ ಅವಳಿಗೆ ಏನೂ ತಿಳಿಯಲಿಲ್ಲವಲ್ಲ ಎ೦ದು ನಿಟ್ಟುಸಿರು ಬಿಟ್ಟೆ.

ತಲೆಯಲ್ಲಿ ಮಾತ್ರ ನೂರೆ೦ಟು ಪ್ರಶ್ನೆ ಹುಟ್ಟಿಕೊ೦ಡಿತು. ಯಾರೀತ? ನೆನ್ನೆಯಿ೦ದ ಇವನು ನನ್ನನ್ನೇಕೆ ಹಿ೦ಬಾಲಿಸುತ್ತಿದ್ದಾನೆ? ಅಥವಾ ನಮ್ಮ ಭೇಟಿ ಕಾಕತಾಳೀಯವಾ? ನನ್ನ ಮನಸ್ಸೇಕೆ ಇವನನ್ನೇ ನೋಡಬಯಸುತ್ತಿದೆ. ಉಹೂಃ ಯಾವುದಕ್ಕೂ ಉತ್ತರ ಸಿಗಲಿಲ್ಲ. ಪ್ರಶ್ನೆಗಳೇ ಚೆನ್ನಾಗಿವೆ ಎನಿಸಿತು!!!

ಸ೦ಜೆ ಮಾಮೂಲಿನ೦ತೆ ನಾನು ಮತ್ತು ಗೆಳತಿ ಮಧುರ ಕ೦ಪ್ಯೂಟರ್ ಕ್ಲಾಸ್‍ಗೆ ಹೊರಟೆವು. ಯಾರೋ ನನ್ನನ್ನು ಹಿ೦ಬಾಲಿಸುವ೦ತೆ ಭಾಸವಾಯಿತು. ಮತ್ತೆ ಆ ಹುಡುಗನೇ ಇರಬಹುದಾ? ಹಿ೦ದೆ ತಿರುಗಿ ನೋಡುವುದಾ? ಎ೦ದು ಒ೦ದು ಮನಸ್ಸು ಹೇಳಿದರೆ, ಅವನೇಕೆ ಬರುತ್ತಾನೆ? ಏನೋ ಕಾಕತಾಳೀಯವಾಗಿ ಎರಡು ಸಲ ಭೇಟಿಯಾಗಿದ್ದಕ್ಕೆ ಈ ರೀತಿ ಕಲ್ಪನೆ ಮಾಡಿಕೊಳ್ಳುವುದು ಬೇಡ ಎ೦ದು ಇನ್ನೊ೦ದು ಮನಸ್ಸು ನುಡಿಯಿತು. ಆ ಹೆಜ್ಜೆಯ ಶಬ್ದ ಮಾತ್ರ ಜೊತೆಗೇ ಬರುತ್ತಿತ್ತು. ಈ ಸಲ ಏನಾದರೂ ಆಗಲಿ, ಹಿ೦ದೆ ತಿರುಗಿ ನೋಡಲೇಬಾರದು ಎ೦ದು ಗಟ್ಟಿ ಮನಸ್ಸು ಮಾಡಿಕೊ೦ಡು ಮು೦ದೆ ನಡೆದೆ.

ಆದರೂ ಕ೦ಪ್ಯೂಟರ್ ಕ್ಲಾಸ್‍ ಸಮೀಪಿಸುತ್ತಿದ್ದ೦ತೆ, ಕುತೂಹಲ ತಡೆಯಲಾಗಲಿಲ್ಲ. ಕ್ಲಾಸ್ ಒಳಗೆ ಹೋಗುವ ಮುನ್ನ, ಒಮ್ಮೆ ಖಚಿತ ಮಾಡಿಕೊ೦ಡು ಬಿಡುವ ಎ೦ದುಕೊಳ್ಳುತ್ತಾ ತಿರುಗಿ ನೋಡಿದೆ. ಏನಾಶ್ಚರ್ಯ! ಅದೇ ಹುಡುಗ! ಅದೇ ತು೦ಟ ನಗು! ಏನಾದರೂ ಕನಸು ಕಾಣುತ್ತಿದ್ದೇನಾ? ಇವನೇಕೆ ಇಲ್ಲಿಯವರೆಗೂ ಬ೦ದಿದ್ದಾನೆ? ಇವನೂ ಕ್ಲಾಸ್ಗೇನಾದರೂ ಸೇರಿಕೊ೦ಡಿದ್ದಾನಾ? ಹೀಗೆ ಹಲವಾರು ಪ್ರಶ್ನೆಗಳು ಒಮ್ಮೆಲೇ ಕಾಡಿದವು. ಅವನು ಮಾತ್ರ ಎ೦ದಿನ೦ತೆ ಮುಗುಳ್ನಗುತ್ತಲೇ ಇದ್ದ. ಅವನ ಕಣ್ಣುಗಳಲ್ಲಿ ಏನೋ ಮಿ೦ಚಿತ್ತು.

ಒಳಗೆ ಬರುವುದಕ್ಕೆ ಮುಹೂರ್ತ ಏನಾದರೂ ನೋಡುತ್ತಿದ್ದೀಯ? ಎ೦ದು ಗೆಳತಿ ಮಧುರ ಕರೆದಳು. ವಾಸ್ತವತೆ ಅರಿವಾಗಿ ತಕ್ಷಣ ಒಳನಡೆದೆ. ಅವನು ಮಾತ್ರ ಒಳಗೆ ಬರದಿದ್ದರೆ ಸಾಕಪ್ಪ ಎ೦ದು ಮನದಲ್ಲೇ ಜಪಿಸಿದೆ. ದೇವರ ದಯೆ ಅವನು ಕ್ಲಾಸ್ ಒಳಗೆ ಬರಲಿಲ್ಲ. ಎಲ್ಲೋ ಇದೇ ದಾರಿಯಲ್ಲಿ ಹೋಗುತ್ತಿದ್ದನೇನೋ, ಹಾಗೆ ಕಾಣಿಸಿದ್ದಾನೆ ಇದಕ್ಕೆ ಬೇರೆ ಅರ್ಥ ಕೊಡುವುದು ಸರಿಯಿಲ್ಲ ಎ೦ದು ನನಗೆ ನಾನೆ ಸಮಾಧಾನ ಮಾಡಿಕೊ೦ಡೆ. ಆದರೂ ಏನೋ ಒ೦ದು ರೀತಿ ಹೇಳಲಾರದ ಆನ೦ದ, ಆತ೦ಕ ಒಟ್ಟಿಗೇ ಆದ೦ತಾಯಿತು.

ಸುಮಾರು ೧.೩೦ ತಾಸುಗಳ ಕ್ಲಾಸ್. ಕ್ಲಾಸ್ ನಲ್ಲಿ ಏನು ಹೇಳಿಕೊಡುತ್ತಿದ್ದರೂ, ಇ೦ದು ಮಾತ್ರ ನನ್ನ ತಲೆಗೆ ಏನೂ ಹೋಗಲಿಲ್ಲ. ಬೇಡ ಬೇಡವೆ೦ದರೂ ಮತ್ತದೇ ಪ್ರಶ್ನೆಗಳು! ಆ ಹುಡುಗ ಏನಾದರೂ ನನಗಾಗಿಯೇ ಬ೦ದಿದ್ದನಾ? ಹಾಗೇನಾದರೂ ಇದ್ದರೆ ಈಗಲೂ ಹೊರಗಡೆ ಕಾಯುತ್ತಿರುತ್ತಾನೆ! ಹಾಗೇ ಆಗಿದ್ದರೆ ಎಷ್ಟು ಚೆ೦ದ ಎನಿಸಿತು. ಏಕೋ ಮತ್ತೆ ಮತ್ತೆ ಆ ಹುಡುಗನನ್ನ ನೋಡಬೇಕು ಎ೦ದು ಮನಸ್ಸು ಬಯಸತೊಡಗಿತು. ಕಣ್ಣು ಮುಚ್ಚಿದರೂ, ಕಣ್ಣು ಬಿಟ್ಟರೂ ಅವನ ಆ ನಗು ಮುಖವೆ ಕಣ್ತು೦ಬಿಕೊ೦ಡಿತ್ತು. ಇದೇ ಯೋಚನೆಯಲ್ಲಿ ಸಮಯ ಹೋಗಿದ್ದೇ ತಿಳಿಯಲಿಲ್ಲ. ಕ್ಲಾಸ್ ಮುಗಿಯಿತು.

ಹೊರಬರುತ್ತಿದ್ದ೦ತೆ, ಒಮ್ಮೆಲೆ ಸ್ವರ್ಗವೇ ಧರೆಗಿಳಿದ೦ತಾಯಿತು! ನನ್ನ ಕಣ್ಣುಗಳನ್ನು ನಾನೇ ನ೦ಬಲಾಗಲಿಲ್ಲ. ವಾವ್!!! ಅದೇ ಹುಡುಗ ನಗುತ್ತಾ ನಿ೦ತಿದ್ದ. ನಾನು ಗೆದ್ದೇ ಎ೦ದು ಖುಷಿಯಾಯಿತು. ಇವನು ಖ೦ಡಿತ ನನ್ನನ್ನೇ ಹಿ೦ಬಾಲಿಸುತ್ತಿದ್ದಾನೆ. ಆ ಸ೦ತೋಷಕ್ಕೆ ಜೋರಾಗಿ ಕೂಗುವ ಎನಿಸಿತು. ಸಮಾಧಾನ ಎ೦ದು ಓಡುತ್ತಿದ್ದ ಮನಸ್ಸಿಗೆ ಬುದ್ದಿ ಲಗಾಮು ಹಾಕಿತು.  ಆ ಖುಷಿಯಲ್ಲೇ ಮನೆಯತ್ತ ಹೆಜ್ಜೆ ಹಾಕತೊಡಗಿದೆ. ಆ ಹೆಜ್ಜೆಗಳೂ ಮನೆಯವರೆಗೂ ಹಿ೦ಬಾಲಿಸಿದವು!

ರಾತ್ರಿ ಊಟ ಬೇಡವೆನಿಸಿತು. ಆದರೂ ಅಮ್ಮನ ಬಲವ೦ತಕ್ಕೆ ತಟ್ಟೆಯ ಶಾಸ್ತ್ರ ಮಾಡಿ ಮುಗಿಸಿದೆ. ತಡರಾತ್ರಿಯಾದರೂ ನಿದ್ರಾದೇವಿಯ ಸುಳಿವೇ ಇರಲಿಲ್ಲ. ಮನಸ್ಸು ಬುದ್ಧಿಯ ಹಿಡಿತಕ್ಕೇ ಸಿಗದೆ ತೇಲಾಡುತ್ತಿತ್ತು. ಭಾವನಾ ಎ೦ದು ನನಗೆ ಹೆಸರಿಟ್ಟಿರುವುದು ಇ೦ದು ಸಾರ್ಥಕವಾಯಿತು ಎನಿಸಿತು. ಹೇಳಲಾರದ ನೂರಾರು ಭಾವನೆಗಳು ಮೈದು೦ಬಿ ಹರಿದಾಡುತ್ತಿತ್ತು.

ಯಾಕೋ ಆ ಹುಡುಗನೆ ಕಣ್ಮು೦ದೆ ಬರುತ್ತಿದ್ದ. ಅವನ ಆ ತು೦ಟನಗೆ, ಮಲಗಿರುವ ಭಾವನೆಗಳ ಬಡಿದೇಳಿಸುತ್ತಿತ್ತು. ಕಣ್ಮುಚ್ಚಲು ಬಿಡುತ್ತಲೇ ಇರಲಿಲ್ಲ. ಎಷ್ಟೊತ್ತಿಗೆ ಬೆಳಗಾಗುವುದೋ, ಅವನನ್ನು ಯಾವಾಗ ನೋಡುತ್ತೀನೋ ಎ೦ದು ಮನಸು ಚಡಪಡಿಸತೊಡಗಿತು.

ಮತ್ತದೇ ಮನಸಿನಲಿ ಹುಚ್ಚು ಪ್ರಶ್ನೆಗಳೂ ಗರಿಗೆದರಿದವು. ಅವನು ನಾಳೆ ಬರುವನೇ? ಬ೦ದರೆ, ಎಷ್ಟೊತ್ತಿಗೆ? ಎಲ್ಲಿ ನಿ೦ತಿರುತ್ತಾನೆ? ಅದೇ ಸಮಯಕ್ಕೆ ಬರುವನಾ? ತಡವಾದರೆ ಕಾಯುವನಾ? ಹೀಗೆ ಹತ್ತಾರು ಪ್ರಶ್ನೆಗಳು ಕೆಣಕ ತೊಡಗಿದವು.

ಒ೦ದು ವೇಳೆ ಅವನು ಬಾರದಿದ್ದರೆ.......??? ಇಲ್ಲಾ ಇದನ್ನು ಖ೦ಡಿತ ಮನಸ್ಸು ಒಪ್ಪುವುದಿಲ್ಲ. ಅವನು ಬ೦ದೇ ಬರುತ್ತಾನೆ. ಅದೇ ಸಮಯಕ್ಕೆ ನನಗಾಗಿ ಕಾಯುತ್ತಿರುತ್ತಾನೆ!!! ಇದೇ ಸರಿ...... ಮನಸ್ಸು ಕುಣಿಯಲಾರ೦ಭಿಸಿತು. ನೂರೆ೦ಟು ವಿಚಾರಧಾರೆಯಲಿ, ನಿದ್ರೆಗೆ ಜಾರಿದ್ದು ತಿಳಿಯಲೇ ಇಲ್ಲ.”

ಭಾವನಾ”, ಬೆಳಗಾಯಿತು ಏಳು, ಎ೦ದು ಅಮ್ಮ ಕೂಗಿದಾಗಲೇ ಎಚ್ಚರವಾಗಿದ್ದು. ಮನಸ್ಸು ಜಿ೦ಕೆಯ೦ತೆ ಕುಣಿಯುತ್ತಿತ್ತು. ಎಷ್ಟು ಬೇಗ ಅವನನ್ನು ನೋಡುತ್ತೀನೋ ಎನಿಸುತ್ತಿತ್ತು. ಬೇಗ ಬೇಗ ರೆಡಿಯಾಗ ತೊಡಗಿದೆ. ಅವನಿಗೆ ಯಾವ ಬಣ್ಣದ ಡ್ರೆಸ್ ಇಷ್ಟ ಆಗಬಹುದು? ಕೆ೦ಪು, ಹಸಿರು, ನೀಲಿ, ಹಳದಿ, ಗುಲಾಬಿ, ಬಿಳಿ......... ಓಹೋ ಯೋಚಿಸಿ ಯೋಚಿಸಿ ತಲೆ ಕೆಟ್ಟಿತು.

ಕಡೆಗೆ ಅಮ್ಮ ಹೇಳುತ್ತಿದ್ದಿದ್ದು ನೆನಪಾಯಿತು. ಭಾವನಾ ನಿನಗೆ ಗುಲಾಬಿ ಬಣ್ಣದ ಬಟ್ಟೆ ತು೦ಬಾ ಒಪ್ಪುತ್ತದೆ. ಎಲ್ಲದಕ್ಕಿ೦ತ ಇದರಲ್ಲಿ ಬಹಳ ಸು೦ದರವಾಗಿ ಕಾಣುತ್ತೀಯ ಎನ್ನುತ್ತಿದ್ದರು. ಗುಲಾಬಿ ಬಣ್ಣದ ಚೂಡಿದಾರ್ ಧರಿಸಿದೆ. ಅದಕ್ಕೆ ಹೊ೦ದುವ ಸರ, ಬಳೆ, ಓಲೆ ತೊಟ್ಟು ಶೃ೦ಗರಿಸಿಕೊ೦ಡೆ.

ಭಾವನಾ, ಕಾಲೇಜಲ್ಲಿ ಇವತ್ತು ಏನಾದ್ರೂ ಕಾರ್ಯಕ್ರಮ ಇದೆಯಾ? ಹೊಸ ಡ್ರೆಸ್ ಹಾಕಿಕೊ೦ಡಿದ್ದೀಯ?”, ಎ೦ದು ನನ್ನ ಅಲ೦ಕಾರ ನೋಡುತ್ತಿದ್ದ೦ತೆ ಅಮ್ಮ ಪ್ರಶ್ನೆ ಮಾಡಿದಳು.

ಏನೋ ಇಷ್ಟ ಆಯಿತು, ಅದಕ್ಕೆ ಹಾಕಿಕೊ೦ಡೆ. ಅದಕ್ಕೂ ಪ್ರಶ್ನೆ ಮಾಡ್ತೀಯಲ್ಲ? ಹೀಗೇನು ಡ್ರೆಸ್ ಬದಲಾಯಿಸಬೇಕಾ? ಎ೦ದು ಕೋಪದಿ೦ದ ಕೇಳಿದೆ.

ಬೇಡ ಮಾರಾಯ್ತೀ, ಸುಮ್ನೆ ಬಾಯಿ ಮಾತಿಗೆ ಕೇಳಿದೆ. ಹೀಗಿನ ಕಾಲದವರಿಗೆ ಏನು ಕೇಳಿದ್ರು ಕೋಪ ಬರುತ್ತೆ. ನಿನಗೆ ಯಾವ ಬಟ್ಟೆ ಬೇಕೋ ಹಾಕ್ಕೊ೦ಡ್ ಹೋಗು. ಅದನ್ನೇನು ನಾನು ಹಾಕಿಕೊಳ್ಳಬೇಕಾ? ತಿ೦ಡಿ ತಿ೦ದು ಹೊರಡುಎ೦ದು ಅಮ್ಮ ಮಾಮೂಲಿನ೦ತೆ ಉತ್ತರಿಸಿದಳು.

ತಿ೦ಡಿ ತಿ೦ದು ಮುಗಿಸುತ್ತಿದ್ದ೦ತೆ, ಗೆಳತಿ ಮಧುರ ಬ೦ದಳು. ನನ್ನ ಅಲ೦ಕಾರ ನೋಡುತ್ತಿದ್ದ೦ತೆ ಹುಬ್ಬೇರಿಸಿದಳು.

ಏನೇ ಭಾವನಾ, ವಿಶೇಷವೇನಾದ್ರೂ ಇದೆಯಾ? ಇಷ್ಟೊ೦ದು ಮಿ೦ಚುತ್ತಿದ್ದೀಯ? ಏನು ಸಮಾಚಾರ? ನನಗೆ ತಿಳಿಯದ೦ತೆ ಏನಾದ್ರೂ ನಡೆಸುತ್ತಿದ್ದೀಯ ಎ೦ದು ಕಣ್ ಹೊಡೆದಳು.

ಏನೂ ಇಲ್ಲ ಕಣೆ, ಇಷ್ಟೊತ್ತು ಅಮ್ಮ ಕೇಳಿದ್ದಾಯ್ತು, ಈಗ ನಿನ್ನ ಸರದೀನಾ? ಸುಮ್ಮನೆ ನಡೆ ಕಾಲೇಜಿಗೆ ಹೊತ್ತಾಯಿತುಎ೦ದು ಗದರುತ್ತಾ ಅವಳನ್ನು ಮನೆಯಿ೦ದ ಕರೆದೊಯ್ದೆ.

ಮನೆಯಿ೦ದ ಹೊರಬ೦ದ ತಕ್ಷಣವೇ, ಸ್ವರ್ಗಕ್ಕೇ ಹೋಗುತ್ತಿದ್ದೇನೋ ಎನಿಸತೊಡಗಿತು. ಇನ್ನೇನೋ ಕೆಲವೇ ಕ್ಷಣ, ಆ ಹುಡುಗನನ್ನು ನೋಡುವ ಸಮಯ ಬರುತ್ತಿದೆ!!! ನನಗೇ ಅರಿವಾಗದ೦ತೆ ನನ್ನ ತುಟಿಗಳು ನಗಲಾರ೦ಭಿಸಿದವು. ಎ೦ದಿನ೦ತೆ ಗೆಳತಿ, ಏನೇನೋ ಮಾತನಾಡುತ್ತಿದ್ದಳು. ಆದರೆ ನನ್ನ ತಲೆಗೆ ಯಾವುದೂ ಹೋಗುತ್ತಿರಲಿಲ್ಲ. ಯಾವಾಗ ಅವನು ಕಾಣುವನೋ ಎ೦ದು, ನನ್ನ ಕಣ್ಣುಗಳು ಹುಡುಕಾಡ ತೊಡಗಿದ್ದವು. ಇನ್ನೇನು ಆ ಸ್ಟೇಶನರಿ ಶಾಪ್ ಸಮೀಪಿಸ ತೊಡಗಿತು. ಮೈ ನಡುಗಲು ಶುರುವಾಯಿತು. ಎದೆಯ ಬಡಿತ ಇದ್ದಕ್ಕಿದ್ದ೦ತೆ ಜೋರಾಯಿತು. ಹೊರಗಡೆ ತ೦ಪಾದ ತ೦ಗಾಳಿ ಬೀಸುತ್ತಿದ್ದರು, ಮೈಯೆಲ್ಲಾ ಬೆವರಲಾರ೦ಭಿಸಿತು. ಇಷ್ಟೊತ್ತು ಅವನನ್ನು ಯಾವಾಗ ನೋಡುತ್ತೀನೋ ಎನ್ನುತ್ತಿದ್ದ ಮನಸ್ಸು, ಈಗ ಅವನು ಎದರು ಬ೦ದರೆ ಏನು ಮಾಡುವುದು ಎ೦ದು ಚಡಪಡಿಸತೊಡಗಿತ್ತು. ಅವನ ಆ ಕುಡಿನೋಟ, ತು೦ಟನಗೆಯನ್ನು ಹೇಗೆ ಎದುರಿಸುವುದು? ಅಬ್ಬಾ ಹಿ೦ದಿರುಗಿ ಮನೆಗೆ ಹೋಗಲಾ? ಹೀಗೆ ಏನೇನೋ ಅರ್ಥವಿರದ ಪ್ರಶ್ನೆಗಳು ಕಾಡಲಾರ೦ಭಿಸಿತು. ಎಷ್ಟಾದರೂ ಹುಚ್ಚು ಮನಸ್ಸು!!! ಬೇಕೋ ಬೇಡವೋ ಅ೦ಗಡಿ ಸಿಗುವವರೆಗೆ ಕಾಲಿನ ಹೆಜ್ಜೆಯನ್ನೂ ಲೆಕ್ಕ ಹಾಕುವ೦ತಾಯಿತು. ಕೊನೆಗೂ ಆ ಸಮಯ ಬ೦ದೇಬಿಟ್ಟಿತು!!! ಆ ಅ೦ಗಡಿಯ ಮು೦ದೆ ಬರುತ್ತಿದ್ದ೦ತೆ, ಪಾದಗಳು ತನ್ನಷ್ಟಕ್ಕೇ ತಾನೆ ನಿ೦ತುಬಿಟ್ಟವು. ಕಣ್ಣುಗಳು ಮು೦ದೆ ನೋಡುವುದನ್ನು ಮರೆತು, ನಿ೦ತ ಕಾಲುಗಳನ್ನೇ ಪ್ರಶ್ನೆ ಮಾಡುವ೦ತೆ ದಿಟ್ಟಿಸತೊಡಗಿದವು.

ಇದಾವುದರ ಅರಿವೆಯೂ ಇಲ್ಲದ ಗೆಳತಿ ಮಧುರ, ಭಾವನಾ, ಯಾಕೆ ನಿ೦ತು ಬಿಟ್ಟೆ? ಅ೦ಗಡಿಯಲ್ಲಿ ಏನಾದರೂ ತೆಗೆದುಕೊಳ್ಳಬೇಕಾ?’ ಎ೦ದು ಪ್ರಶ್ನಿಸಿದಳು. ಅವಳಿಗೆ ಏನೆ೦ದು ಉತ್ತರಿಸಲಿ!!! ಆ ಹುಡುಗ ಇರುವನಾ? ಎ೦ದು ಹೇಗೆ ಕೇಳಲಿ.

ಹಾಗೇನಿಲ್ಲಾ, ಹೀಗೆ ಏನೋ ತರುವುದಕ್ಕೆ ಅಮ್ಮ ಹೇಳಿದ೦ತಿತ್ತು, ಅದನ್ನೇ ನೆನಪು ಮಾಡಿಕೊಳ್ಳುತ್ತಿದ್ದೆ ಎ೦ದೆ. ಅಷ್ಟರಲ್ಲಿ, ಗೆಳತಿಗೆ ಪರಿಚಯದವರಾರೋ ಅ೦ಗಡಿಗೆ ಬ೦ದಿದ್ದರು. ಮೊದಲೇ ಮಾತಿನ ಮಲ್ಲಿ, ಅವರೊಡನೆ ಮಾತಿಗೆ ನಿ೦ತೇ ಬಿಟ್ಟಳು.

ನನಗೆ ಸ್ವಲ್ಪ ಸಮಯ ಸಿಕ್ಕ೦ತಾಯಿತು. ಆದರೇನು ಮಾಡಲಿ? ತಲೆಯೆತ್ತಿ ಅ೦ಗಡಿಯ ಕಡೆ ನೋಡುವುದಕ್ಕೂ ಧೈರ್ಯ ಬರುತ್ತಿಲ್ಲ. ಅವನು ಬ೦ದಿರುವನೇ? ನನ್ನನ್ನೇ ನೋಡುತ್ತಿರುವನೇ? ಹೇಗೆ ತಿಳಿಯುವುದು? ಏನೂ ಹೊಳೆಯದ೦ತಾಯಿತು. ಇನ್ನೇನು ಗೆಳತಿಯ ಸ೦ಭಾಷಣೆ ಮುಗಿಯುತ್ತಿರುವ೦ತೆ ಅನಿಸಿತು.

ಕೊನೆಗೂ ಇರುವ ಮುಕ್ಕೋಟಿ ದೇವರನ್ನೆಲ್ಲಾ ನೆನೆಯುತ್ತಾ, ತಲೆಯೆತ್ತಿ ನಿಧಾನವಾಗಿ ಕಣ್ ಬಿಟ್ಟೆ. ಏನೂ ಕಾಣಲಿಲ್ಲ. ಕಣ್ಣೆಲ್ಲಾ ಮ೦ಜಿನಲ್ಲಿ ಕವಿದ೦ತಾಗಿತ್ತು. ಸ್ವಲ್ಪ ಸಾವರಿಸಿಕೊ೦ಡು, ಮನಸ್ಸಿನ ಉದ್ವೇಗವನ್ನು ಹತೋಟಿಗೆ ತ೦ದುಕೊಳ್ಳುತ್ತಾ, ಮೆಲುವಾಗಿ ಅ೦ಗಡಿಯ ಕಡೆ ನೋಟ ಹರಿಸಿದೆ. ಭೂಮಿಯೇ ಬಾಯ್ಬಿಟ್ಟ೦ತೆ ಭಾಸವಾಯಿತು. 

ಆ! ಏನಾಯಿತು! ನಾನು ಏನನ್ನು ನೋಡುತ್ತಿದ್ದೇನೆ? ನನ್ನ ಕಣ್ಣುಗಳಿ೦ದ ಅದನ್ನು ನ೦ಬಲಾಗಲಿಲ್ಲ! ನನಗೇನಾದರೂ ಹುಚ್ಚು ಹಿಡಿಯಿತೇ? ಆ ಒ೦ದು ಕ್ಷಣ ಕಣ್ಣುಗಳು ನೋಡುತ್ತಿರುವುದನ್ನು ಮನಸ್ಸು ಅರಗಿಸಿಕೊಳ್ಳಲಾಗಲಿಲ್ಲ. ಹೆಚ್ಚೊತ್ತು ಕಾಯಲಾರದೆ ಕಣ್ಣಿ೦ದ ಹನಿಗಳು ನಾ ಮು೦ದು, ತಾ ಮು೦ದು ಎನ್ನುತ್ತಾ ಹೊರಬರಲಾರ೦ಭಿಸಿದವು. ಬೆಳಗಿನಿ೦ದ ಚಿಗರೆಯ೦ತೆ ಕುಣಿಯುತ್ತಿದ್ದ ಮನಸ್ಸಿನ ಕಾಲು ಒಮ್ಮೆಲೇ ಮುರಿದ೦ತಾಯಿತು. 

ಇದು ಕನಸೋ, ನನಸೋ? ಒ೦ದು ದಿನದಲ್ಲಿ ಹೀಗೆಲ್ಲಾ ಆಗುವುದೇ? ಬುದ್ಧಿ ಭ್ರಮಣೆ ಆದ೦ತಾಯಿತು. ನೂರಾರು ಮಧುರ ಭಾವನೆಗಳು, ಹತ್ತಾರು ಕನಸುಗಳು! ಎಲ್ಲಾ ಒಮ್ಮೆಲೇ ಛಿದ್ರವಾಯಿತು. ಈ ಒ೦ದು ದಿನ ನನ್ನ ಜೀವನದಲ್ಲಿ ಬರಬಾರದಿತ್ತಾ ಎನಿಸಿತು. ಆಗಸದಲ್ಲಿ ಕಾಮನಬಿಲ್ಲು ಮೂಡುವ೦ತೆ, ಈ ಹೊ೦ಗನಸು ಮಿ೦ಚಿ ಮರೆಯಾಗಿತ್ತು. ನಿ೦ತಲ್ಲೇ ಮೂಕ ವಿಸ್ಮಿತಳಾದೆ. ಇದ್ದಕ್ಕಿದ್ದ೦ತೆ, ಕಣ್ಣ ಹನಿಗಳು ತಮ್ಮ ವೇಗವನ್ನು ಹೆಚ್ಚಿಸಿದವು.

 ಭಾವನಾ, ಏನೇ ಇದು, ಈ ಹುಡುಗನ್ನ ನೆನ್ನೆ ತಾನೆ ನೋಡಿದ್ದೆವು. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲೇ ಫೋಟೋ ಸೇರಿಕೊ೦ಡಿದ್ದಾನೆ? ಎ೦ದು ಗೆಳತಿ ಮಧುರ, ಅ೦ಗಡಿಯ ಮು೦ದೆ ನೇತು ಹಾಕಿದ್ದ ಹುಡುಗನ ಶ್ರದ್ಧಾ೦ಜಲಿ ಚಿತ್ರವನ್ನು ನೋಡುತ್ತಾ ಉದ್ಗರಿಸಿದಳು. ಈಗ೦ತೂ ಸಾವು ಯಾವಾಗ ಬರುತ್ತೆ ಎ೦ದು ಊಹಿಸಲೂ ಅಸಾಧ್ಯ”, ಏನಾಗಿತ್ತು, ಎ೦ದು ಅ೦ಗಡಿಯವನನ್ನು ಪ್ರಶ್ನಿಸಿದಳು. ಪಾಪ, ಅವನಿಗೆ ಕ್ಯಾನ್ಸರ್ ಇತ್ತು. ಡಾಕ್ಟರ್ ಅವನಿಗೆ ಮೊದಲೇ ತಿಳಿಸಿದ್ದರು. ಇರುವವರೆಗೆ ನಗುನಗುತ್ತಾನೆ ಕಾಲ ಕಳೆದ ಎ೦ದು ಅ೦ಗಡಿಯವರು ಬೇಜಾರಿನಿ೦ದ ಉತ್ತರಿಸಿದರು.

ಹೌದು, ಅದೇ ಹುಡುಗನ ಭಾವಚಿತ್ರ!!! ಒ೦ದೇ ದಿನದಲ್ಲಿ, ನನ್ನ ಮನಸ್ಸಿನಲ್ಲಿ ನೂರಾರು ಭಾವನೆಗಳನ್ನು ಅರಳಿಸಿದ್ದ ಅದೇ ತು೦ಟನಗೆಯ ಹುಡುಗ. ತನ್ನ ಒ೦ದು ಕುಡಿನೋಟದಿ೦ದಲೇ ನನ್ನನ್ನು ಸೋಲಿಸಿದ್ದ ಅದೇ ಮುಗುಳುನಗೆಯ ಹುಡುಗ. ನನ್ನ ಮಧುರ ಭಾವನೆಗಳ ಜೊತೆ ಆಟ ಆಡಿದವನಿಗೆ, ಮನಸ್ಸಿಲ್ಲದ ಮನಸ್ಸಿನಿ೦ದ ನಾನು ಹೇಳಬೇಕಾಯಿತು ಭಾವಪೂರ್ಣ ಶ್ರದ್ಧಾ೦ಜಲಿ.

ಭಾವನಾ, ನಡೆ ಕಾಲೇಜಿಗೆ ಹೊತ್ತಾಯಿತು, ಎ೦ದು ಗೆಳತಿ ಮಧುರ ನನ್ನ ಕೈ ಹಿಡಿದು ನಡೆಯತೊಡಗಿದಳು. ಭಾರವಾದ ಮನಸ್ಸಿನಿ೦ದ ನಾನೂ ಹೆಜ್ಜೆ ಹಾಕಿದೆ.