ರಾಜ್ಯದಲ್ಲಿ ಭೀಕರ
ಬರಗಾಲ. ಬರ ಸಂಬಂಧಿತ ಹತ್ತಾರು ದೃಶ್ಯಗಳು. ಪರಿಹಾರಕ್ಕಾಗಿ ಜನರು ಸರ್ಕಾರವನ್ನು ಬೇಡಿಕೊಳ್ಳುತ್ತಿರುವ
ದೃಶ್ಯಗಳು.
ಝೂಮ್-ಇನ್
ಮಾಡಿದರೆ, ಬೆಳಿಗ್ಗೆ 8 ಗಂಟೆ. ಟಿ.ವಿ.ಯ ನ್ಯೂಸ್ ಚಾನೆಲ್ ಒಂದರಲ್ಲಿ ಬರಗಾಲದ ಬಗ್ಗೆ ಈ ರೀತಿಯ
ಹಲವಾರು ಸುದ್ದಿಗಳು ಬರುತ್ತಿರುತ್ತದೆ.
ನಿವೃತ್ತ ಪ್ರಾಧ್ಯಾಪಕರ
ಮನೆ. ವೃದ್ಧ ದಂಪತಿಯರಿಬ್ಬರೆ ಮನೆಯಲ್ಲಿರುತ್ತಾರೆ. (ಮಗ ಬೇರೆ ಸಂಸಾರ ಹೂಡಿರುತ್ತಾನೆ).
ಗಂಡ ಸೋಫಾ ಮೇಲೆ
ಕುಳಿತು ಪತ್ರಿಕೆ ತಿರುವುತ್ತಾ ಟಿ.ವಿ. ನೋಡುತ್ತಿರುತ್ತಾನೆ. ಹೆಂಡತಿ ಗಂಡನಿಗಾಗಿ ಕಾಫಿ
ತರುತ್ತಾಳೆ. ಟಿ.ವಿ.ಯಲ್ಲಿ ಬರುತ್ತಿರುವ ’ಬರ’ದ ಸುದ್ದಿ ಹಾಗೂ ಅದರ ಪರಿಹಾರಕ್ಕಾಗಿ
ಆಗ್ರಹಿಸುತ್ತಿರುವ ದೃಶ್ಯ ನೋಡುತ್ತಾ, ಗಂಡನೊಂದಿಗೆ ಮಾತಿಗಿಳಿಯುತ್ತಾಳೆ.
ಹೆಂಡತಿ: ದಿನ ಬೆಳಗಾದರೆ ಟಿ.ವಿ. ಯಲ್ಲಿ ಇದೇ ಸುದ್ದಿ.
ಪರಿಹಾರ ಕೊಡಿ ಅಂತ ಕೇಳ್ತಾರೆ. ನಾವು ಯಾರನ್ನ ಕೇಳೋದು, ನಮ್ಮ ಬರಕ್ಕೂ ಪರಿಹಾರ ಕೊಡಿ ಅಂತ?
ಗಂಡ: ಹಾಗೆಂದರೇನು? ಯಾವುದರ ಬಗ್ಗೆ ಮಾತಾಡ್ತಯಿದೀಯ?
ಹೆಂಡತಿ: ಗೊತ್ತಿಲ್ದೇ ಇರೋದ್ ಏನಿದೆ? ದೇಶದಲ್ಲಿ ಮಳೆ ಇಲ್ದೆ,
ಬೆಳೆ ನಾಶ ಆಯ್ತು, ಬರ ಬಂದಿದೆ, ರೈತರಿಗೆ ಪರಿಹಾರ ಕೊಡಿ ಅಂತಾನೆ ಎಲ್ಲಾರೂ ಮಾತಾಡ್ತಿದ್ದಾರೆ.
(ಗೋಡೆಯ ಮೇಲೆ
ನೇತು ಹಾಕಿರುವ ಮಗನ ಫೋಟೋ ನೋಡುತ್ತಾ, ಕಣ್ಣಲ್ಲಿ ನೀರು ತುಂಬಿಕೊ೦ಡು, ಮನೆಬಿಟ್ಟು ಹೋದ ಮಗನ
ಬಗ್ಗೆ ನೆನೆಯುತ್ತಾ...)
ಎಲ್ಲರೂ
ಪ್ರಾಪಂಚಿಕ ಬರದ ಬಗ್ಗೆ ಮಾತಾಡ್ತ ಇದಾರೋ ಹೊರತು, ಪ್ರೀತಿಯಿಲ್ಲದೆ ಮನಸ್ಸಿಗೆ ಆಗಿರುವ ಬರದ
ಬಗ್ಗೆ ಯಾರೂ ಮಾತಾಡ್ತಯಿಲ್ಲ.
ಗಂಡ: (ಹೆಂಡತಿಯನ್ನು ದಿಟ್ಟಿಸಿ ನೋಡುತ್ತಾ ಗದ್ಗದಿತನಾಗಿ) ಸಮಾಧಾನ
ಮಾಡಿಕೊ, ಎಲ್ಲಾ ನಾವು ಪಡೆದುಕೊಂಡು ಬಂದಿದ್ದು.
ಹೆಂಡತಿ: ಮಾತಲ್ಲಿ
ಹೇಳಿದಷ್ಟು ಸುಲಭ ಅಲ್ಲ ರೀ. ಇಷ್ಟು ವರ್ಷ ಕಷ್ಟ ಪಟ್ಟು ಸಾಕಿದ ಮಗ, ಬೆಳೆದು ಬಯಸಿದಂತೆ ಉಪನ್ಯಾಸಕನಾದ,
ಸಮಾಜದಲ್ಲಿ ಗೌರವಾನ್ವಿತ ಹುದ್ದೆಯಲ್ಲಿ ಕೆಲಸದಲ್ಲಿದ್ದಾನೆ. ಅಷ್ಟೇ ಅಲ್ಲದೆ ಸಮಾಜಮುಖಿ ಕಾರ್ಯಗಳಲ್ಲೂ ಸೇವೆ ಮಾಡುತ್ತಿದ್ದಾನೆ ಎಂದು ಹೆಮ್ಮೆ ಪಡುವಷ್ಟರಲ್ಲಿ, “ಜೊತೆಯಲ್ಲಿ ಇರೋದಿಕ್ಕಾಗಲ್ಲ, ಬೇರೆ ಸಂಸಾರ ಮಾಡ್ತೀನಿ” ಅಂತ ಹೆಂಡತಿ ಮಾತು ಕೇಳಿ ಮನೆ ಬಿಟ್ಟು ಹೋಗಿದ್ದಾನೆ. ನಮಗೂ ಈ
ಇಳಿ ವಯಸ್ಸಿನಲ್ಲಿ ಮಗ, ಸೊಸೆ, ಮೊಮ್ಮಕ್ಕಳ ಜೊತೆ ಇರಬೇಕು ಅಂತ ಆಸೆ ಇರೋದಿಲ್ವ?
ಗಂಡ: ನಮಗೆ ಮಾತ್ರ
ಆಸೆ ಇದ್ದರೆ ಸಾಲಲ್ಲ. ಅವರಿಗೂ ಆ ಭಾವನೆ ಇರಬೇಕು. ಜೀವನದಲ್ಲಿ ಸುಸಜ್ಜಿತವಾಗಿ ನೆಲೆಗೊಂಡ ನಂತರ,
ಭವಿಷ್ಯದ ನಿರ್ಧಾರ ಅವರವರ ವಯಕ್ತಿಕ ವಿಚಾರ. ಪ್ರಶ್ನೆ ಮಾಡುವುದು ಸರಿಯಲ್ಲ.
ಹೆಂಡತಿ:
(ಬೇಸರದಿಂದ) ನಿಮ್ಮದು ಯಾವಾಗಲೂ ಇದೇ ಮಾತು. ಇಷ್ಟು ವರ್ಷ ಕಾಲೇಜಲ್ಲಿ ಉಪದೇಶ ಮಾಡಿದ್ದು ಸಾಲ್ದು
ಅ೦ತ, ಈಗ ನನಗೆ ಶುರು ಮಾಡಿಕೊಂಡಿದ್ದೀರ?
ಗಂಡ: ಉಪದೇಶ
ಅಲ್ವೆ, ವಾಸ್ತವ!!! ನೀನು ಇದನ್ನು ಒಪ್ಪಿಕೊಳ್ಳುತ್ತಿಲ್ಲ ಅಷ್ಟೆ. ಜೀವನ ಬಂದ ಹಾಗೆ
ಸ್ವೀಕರಿಸಬೇಕು.
ಹೆಂಡತಿ:
(ದು:ಖದಿಂದ) ನಾವ್ ಏನ್ರೀ ಕಮ್ಮಿ ಮಾಡಿದ್ವಿ ಅವನಿಗೆ? ನಮ್ಮ ಪ್ರೀತಿಲಿ ಏನು ಕೊರತೆ ಇತ್ತು? ಅವನ
ಯಾವ ಇಷ್ಟಕ್ಕಾದರೂ ಅಡ್ಡಿ ಪಡಿಸಿದ್ವಾ? ಪ್ರತಿಯೊಂದನ್ನೂ ಅವನ ಇಷ್ಟದಂತೆ ಮಾಡಿದೆವು. ಓದು,
ಉದ್ಯೋಗ, ಮದುವೆ ಎಲ್ಲಾ........ ಆದರೆ ಈಗ ಬೇರೆ ಸಂಸಾರ ಮಾಡ್ತೀನಿ ಅಂತ ಹೋದನಲ್ಲಾ, ನಮ್ಮ ಜೊತೆ
ಇದ್ದಿದ್ದರೆ ಏನು ತೊಂದರೆ ಆಗ್ತಾಯಿತ್ತು?
ಗಂಡ: ಮತ್ತೆ
ಮತ್ತೆ ಅದೇ ಪ್ರಶ್ನೆ.. ಎಷ್ಟು ಸಲ ಕೇಳಿದ್ರೂ ಏನೂ ಪ್ರಯೋಜನವಿಲ್ಲ. ಅರ್ಥ ಮಾಡಿಕೊ. ಪ್ರೀತಿ,
ಸಂಬಂಧ ಎಲ್ಲಾ ನಾವು ಕೇಳಿ ಪಡೆದುಕೊಳ್ಳುವಂತಹುದಲ್ಲ, ತಾನಾಗೆ ಬರಬೇಕು.
ಹೆಂಡತಿ: ಅಂದರೆ..
ಇದಕ್ಕೆ ಪರಿಹಾರನೇ ಇಲ್ವಾ? ನಮಗೆ ನಮ್ಮ ಮಗನ ಜೊತೆ ಇರೋ ಭಾಗ್ಯನೇ ಇಲ್ವಾ?
ಗಂಡ: ಇಲ್ಲಾ ಅಂತ
ಹೇಳಕ್ಕಾಗಲ್ಲ... ಇದೆ ಅಂತ ನಂಬಿಕೊಳ್ಳಬೇಕು, ಭರವಸೆಯಿಂದ ಬದುಕಬೇಕು. ಅವನಿಗೂ ಒಂದು ದಿನ ಈ ಸತ್ಯ
ಅರಿವಾಗಿ ಮನೆಗೆ ಹಿಂತಿರುಗಿ ಬರುವ ಕಾಲ ಬರಬಹುದು!
ಹೆಂಡತಿ: (ಬಹಳ
ಸಂಕಟದಿಂದ) ಕಾಲ ಬರಬಹುದು, ಅಂದರೆ ಯಾವಾಗ? ನಾವು
ಕಾಲವಾದ ಮೇಲಾ? (ಕಣ್ಣೀರಿನ ಕಟ್ಟೆಯೊಡೆದು, ಅಳಲಾರಂಭಿಸುತ್ತಾಳೆ).
ಗಂಡ: ಯಾಕಷ್ಟು
ಬೇಜಾರು ಮಾಡಿಕೊಳ್ಳುತ್ತೀಯ? ಜೀವನದಲ್ಲಿ ಭರವಸೆ ಇಡು. ನಮ್ಮ ದೇಶದಲ್ಲಿ ಇನ್ನೂ ಸಂಸ್ಕೃತಿ
ಸತ್ತಿಲ್ಲ. ನಾವು ಕಲಿಸಿದ ಸಂಸ್ಕಾರ ಅವನಲ್ಲಿ ಇನ್ನೂ ಇದೆ. ಏನೋ ಆಧುನಿಕತೆಯ ಭ್ರಮೆಗೆ ಒಳಗಾಗಿ
ಹೋಗಿದ್ದಾನೆ. ಒಂದಲ್ಲ ಒಂದು ದಿನ ನಮ್ಮ ಪ್ರೀತಿ ಅರಿವಾಗಿ, ನಮ್ಮ ಜೊತೆ ಇರುವುದಕ್ಕೆ ಬಂದೇ ಬರುತ್ತಾನೆ.
ಆ ದಿನ ನಾಳೆನೂ ಆಗಿರಬಹುದು.
ಹೆಂಡತಿ: (ಮಗನ ಫೋಟೋವನ್ನೆ ನೋಡುತ್ತಾ
ಅಳುತ್ತಿರುತ್ತಾಳೆ)
ಗಂಡ: (ಭಾರವಾದ
ಮನಸ್ಸಿನಿಂದ, ದು:ಖವನ್ನು ತಡೆದುಕೊಳ್ಳುತ್ತಾ, ಕಣ್ತುಂಬಿಕೊಂಡು ಮಗನ ಫೋಟೊವನ್ನು ನೋಡುತ್ತಾನೆ).
ಹಿನ್ನೆಲೆ ಸಂಗೀತ: (ತಂದೆ, ತಾಯಿಯ
ಮನದಲ್ಲಿ ಮೂಡುವ ಹಾಡಿನ ಸಾಲುಗಳು)
ಮೂರು
ದಿನದ ಬಾಳಲಿ, ನೂರು ತರಹ ಭಾವನೆ
ಕೂಡಿ
ಕಳೆವ ಆಟಕೆ, ಮನಸು ತಾನೆ ವೇದಿಕೆ
ಇರುಳು ಕಂಡ ಕನಸಿಗೆ, ಹಗಲು ಕೊಡುವುದೆ ಮೆಚ್ಚುಗೆ
ಕರುಳು
ಕೇಳುವ ಪ್ರಶ್ನೆಗೆ, ಕಾಲವೊಂದೇ ಉತ್ತರ II
II
ದೃಶ್ಯ -
೨
(ಮಗನ ಮನೆ. ಗಂಡ
ಹೆಂಡತಿ (ಪುರುಷೋತ್ತಮ, ದೀಪ) ಇಬ್ಬರೂ ಕೆಲಸಕ್ಕೆ ಹೋಗುತ್ತಿರುತ್ತಾರೆ. ಅವರಿಗೆ ಇಬ್ಬರು
ಮಕ್ಕಳು. ಮಗಳು-ಪ್ರೀತಿ ೬ ವರ್ಷ, ಮಗ-ಖ್ಯಾತಿ ೪ ವರ್ಷ).
ಸಮಯ ಬೆಳಿಗ್ಗೆ 8 ಗಂಟೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಮತ್ತು ತಾವು ತಮ್ಮ ಕಾರ್ಯಕ್ಕೆ ಹೊರಡಲು ಗಡಿಬಿಡಿಯಿಂದ
ಸಿದ್ದರಾಗುತ್ತಿರುತ್ತಾರೆ.
ಈದಿನ ಪುರುಷೋತ್ತಮನನ್ನು
ವೃದ್ಧಾಶ್ರಮವೊಂದರ ವಾರ್ಷಿಕ ಕಾರ್ಯಕ್ರಮವೊಂದಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿರುತ್ತಾರೆ. ಅದಕ್ಕಾಗಿ
ಬಹಳ ಸಂತೋಷದಿಂದ ಅಣಿಯಾಗುತ್ತಿರುತ್ತಾನೆ.
ಗಂಡ
(ಹೆಂಡತಿಯನ್ನು ಉದ್ದೇಶಿಸಿ): ಆಯ್ತಾ. ಮಕ್ಕಳು ರೆಡಿಯಾದ್ರಾ? ಅವರನ್ನು ಸ್ಕೂಲಿಗೆ ಬಿಟ್ಟು
ನಿನ್ನನ್ನ ಕಛೇರಿಗೆ ಬಿಟ್ಟು, ನಾನು ಕಾರ್ಯಕ್ರಮಕ್ಕೆ ಹೋಗುವಷ್ಟರಲ್ಲಿ ಸರಿಯಾಗುತ್ತದೆ. ಆಶ್ರಮ
ಬೇರೆ ಸಿಟಿಯಿಂದ 30 ಕಿ.ಮೀ. ದೂರವಿದೆ. ತಡವಾಗಿ ಹೋಗುವುದು ನನಗೆ ಇಷ್ಟ ಆಗುವುದಿಲ್ಲ ಅಂತ ನಿನಗೆ
ಗೊತ್ತಿದೆ ತಾನೆ?
ಹೆಂಡತಿ ದೀಪ: ಸರಿ
ಆಯಿತು... ಐದೇ ನಿಮಿಷ...
ಮಗ ಖ್ಯಾತಿ:
ಅಪ್ಪಾ ನನಗೆ ಶೂ ಹಾಕಿ ಕೊಡಪ್ಪ...
ಮಗಳು ಕೀರ್ತಿ:
ಅಪ್ಪಾ ನನ್ನ ಬೆಲ್ಟು......
ಗಂಡ: ಬೇಗ ಬೇಗ
ನೀವೆ ರೆಡಿಯಾಗೋದನ್ನ ಕಲಿಯಬೇಕು. (ಎಂದು ರೇಗುತ್ತಾ ಅವರನ್ನು ರೆಡಿ ಮಾಡತೊಡಗುತ್ತಾನೆ).
ಮಗ ಖ್ಯಾತಿ: ನೀವು
ಚಿಕ್ಕವರಾಗಿದ್ದಾಗ ಎಲ್ಲಾ ನೀವೇ ಮಾಡಿಕೊಳ್ಳುತ್ತಿದ್ರಾ? ನಿಮ್ಮ ಅಪ್ಪನೂ ನಿಮಗೆ ಹೀಗೆ
ಹೇಳ್ತಿದ್ರಾ? (ಹೀಗಿನ ಮಕ್ಕಳು ತುಂಬಾ ಚುರುಕು, ಪ್ರಶ್ನಿಸಲಾರಂಭಿಸಿದರು)
ಹೆಂಡತಿ ದೀಪ:
ಆಯ್ತು ರೀ .... ಹೊರಡೋಣ...
(ಎಲ್ಲರೂ ಹೊರಡುತ್ತಾರೆ.
ಮಕ್ಕಳನ್ನು ಶಾಲೆಗೆ ಬಿಟ್ಟು, ಪತ್ನಿಯನ್ನು ಅವಳ ಕಛೇರಿಗೆ ಬಿಟ್ಟು, ಆಹ್ವಾನಿಸಿದ್ದ
ವೃದ್ಧಾಶ್ರಮದ ಕಡೆಗೆ ಕಾರಿನಲ್ಲಿ ಹೊರಡುತ್ತಾನೆ)
ದೃಶ್ಯ - ೩
ವೃದ್ಧಾಶ್ರಮ:
(ನಗರಪ್ರದೇಶದಿಂದ 3೦ ಕಿ.ಮೀ. ದೂರದಲ್ಲಿ, ಪ್ರಶಾಂತವಾದ ಸ್ಥಳದಲ್ಲಿ, ಪ್ರಕೃತಿ ಸೌಂದರ್ಯದಿಂದ
ಕಂಗೊಳಿಂತ್ತಿರುತ್ತದೆ. ಈ ದಿನ ಆಶ್ರಮದ ವಾರ್ಷಿಕ ಕಾರ್ಯಕ್ರಮವಾಗಿದ್ದರಿಂದ ಸಕಲ ರೀತಿಯಲ್ಲಿ
ಅಲಂಕಾರಗೊಂಡಿರುತ್ತದೆ.)
ಆಶ್ರಮದ
ಮುಖ್ಯಸ್ಥರು : ಸರ್ ನಮಸ್ತೆ. ನಮ್ಮ ಮನವಿ ಸ್ವೀಕರಿಸಿ ಬ೦ದಿದ್ದಕ್ಕೆ ಬಹಳ ಸ೦ತೋಷ. (ಹೂಗುಚ್ಛ
ನೀಡಿ ಸ್ವಾಗತಿಸುತ್ತಾರೆ).
ಪುರುಷೋತ್ತಮ:
ಅವಕಾಶ ದೊರೆತಿದ್ದು ನನ್ನ ಸೌಭಾಗ್ಯ. ಕಾರ್ಯಕ್ರಮಕ್ಕೆ ತಡವಾಗಲಿಲ್ಲ ತಾನೆ?
ಆಶ್ರಮದ
ಮುಖ್ಯಸ್ಥರು : ಇಲ್ಲಾ ಸಾರ್. ಕಾರ್ಯಕ್ರಮ ಪ್ರಾರ೦ಭ ಆಗುವುದಕ್ಕೆ ಇನ್ನೂ ಅರ್ಧ ಗ೦ಟೆ ಆಗುತ್ತದೆ.
ಒಳಗೆ ಬನ್ನಿ, ಕಛೇರಿಯಲ್ಲಿ ಕುಳಿತುಕೊಳ್ಳುವರ೦ತೆ (ಎ೦ದು ಕರೆದೊಯ್ಯಲು ಸಿದ್ಧರಾಗುತ್ತಾರೆ).
ಪುರುಷೋತ್ತಮ:
ಪರವಾಗಿಲ್ಲ. ನೀವು ನಿಮ್ಮ ಕೆಲಸದ ಕಡೆ ಗಮನ ಕೊಡಿ. ಆಶ್ರಮ ತು೦ಬಾ ಚೆನ್ನಾಗಿದೆ. ಕಾರ್ಯಕ್ರಮ
ಆರ೦ಭವಾಗುವಷ್ಟರಲ್ಲಿ ಒ೦ದು ಸುತ್ತು ನೋಡಿಬರುತ್ತೇನೆ. ನಿಮ್ಮದೇನೂ ಅಭ್ಯ೦ತರವಿರದಿದ್ದರೆ?
(ಮುಗುಳ್ನಗುತ್ತಾ)
ಆಶ್ರಮದ
ಮುಖ್ಯಸ್ಥರು : ಅಯ್ಯೋ ಸಾರ್ ಅಷ್ಟೊ೦ದು ದೊಡ್ಡ ಮಾತೆಲ್ಲಾ ಹೇಳಬೇಡಿ, ಮುಜುಗರ ಆಗುತ್ತದೆ. ಪರವಾಗಿಲ್ಲ
ನೋಡಿಕೊ೦ಡು ಬನ್ನಿ. ನಾನು ಅಷ್ಟರಲ್ಲಿ ಸಿದ್ಧತೆ ಎಲ್ಲಿಯವರೆಗೆ ಬ೦ದಿದೆ ಎ೦ದು ನೋಡುತ್ತೇನೆ.
(ಎ೦ದು ಹೊರಡುತ್ತಾರೆ).
ವೃದ್ಧ ವ್ಯಕ್ತಿ: ಏನಪ್ಪಾ
ಹೇಳಿದೆ? ಸು೦ದರವಾದ ಸ್ಥಳ!!! ಯಾವುದು? ಸ೦ತೋಷ ಕೊಡುವ೦ತಹದ್ದು?
ಪುರುಷೋತ್ತಮ: ಈ
ಪರಿಸರ ನೋಡುತ್ತಿದ್ದರೆ, ನಿಮಗೆ ಸ೦ತೋಷ ಆಗೋದಿಲ್ವ?
ವೃದ್ಧ ವ್ಯಕ್ತಿ:
ಪರಿಸರ ಮಾತ್ರದಿ೦ದಲೇ ಸ೦ತೋಷ ಆಗುತ್ತಿದ್ದರೆ, ಯಾವ ವ್ಯಕ್ತಿಗೂ ಬೇಸರ ಅನ್ನುವ ಪದಕ್ಕೆ ಅರ್ಥ ತಿಳಿಯುತ್ತಿರಲಿಲ್ಲ.
ಪುರುಷೋತ್ತಮ:
ಹಾಗಾದ್ರೆ ನಿಮ್ಮ ಪ್ರಕಾರ ಸ೦ತೋಷ ಯಾವುದರಿ೦ದ ಸಿಗುತ್ತದೆ?
ವೃದ್ಧ ವ್ಯಕ್ತಿ: ಮನಸ್ಸು
ಸ೦ತೋಷವಾಗಿದ್ರೆ ಮಾತ್ರ ಹೊರ ಪ್ರಪ೦ಚ ಸು೦ದರವಾಗಿ ಕಾಣಿಸುತ್ತದೆ.
ಪುರುಷೋತ್ತಮ:
ನಿಮ್ಮ ಮನಸ್ಸಿಗೆ ಬೇಜಾರಾಗುವ೦ತಹುದು ಏನಾಗಿದೆ?
ವೃದ್ಧ ವ್ಯಕ್ತಿ
(ಬಹಳ ಬೇಸರದಿ೦ದ): ಎಲ್ಲಾ ಸರಿಯಾಗಿದ್ದರೆ, ನಾನು ನನ್ನ ಮಗ, ಸೊಸೆ ಮತ್ತು ಮೊಮ್ಮಕ್ಕಳ ಜೊತೆ ಕಾಲ
ಕಳೆಯಬಹುದಿತ್ತು!
ಪುರುಷೋತ್ತಮ: ಅ೦ದರೆ.....
ಏನಾಯ್ತು?
ವೃದ್ಧ ವ್ಯಕ್ತಿ:
ಕಷ್ಟ ಪಟ್ಟು ಸಾಕಿ ಬೆಳೆಸಿದ ಮಗ, ತನ್ನ ಜೀವನದಲ್ಲಿ ನೆಲೆಗೊ೦ಡ ಕೂಡಲೇ, ತಾನು ಮತ್ತು ತನ್ನ
ಸ೦ಸಾರ ಎ೦ದು ಹೊರಟು ಹೋದ. ಹನಿ ಹನಿಗೂಡಿ ಕಟ್ಟಿದ್ದ ಕನಸೆಲ್ಲಾ ನುಚ್ಚು ನೂರಾಯ್ತು. ಮಗನ ಮೇಲೆ
ಬೆಟ್ಟದಷ್ಟು ಪ್ರೀತಿ ಹೊ೦ದಿದ್ದ ನನ್ನ ಹೆ೦ಡತಿ ಅದೇ ಚಿ೦ತೆಯಲ್ಲಿ ತೀರಿಕೊ೦ಡಳು. ಒಬ್ಬನೇ ಆ
ಮನೆಯಲ್ಲಿ ಇರಲಾಗದೇ, ಈ ಆಶ್ರಮಕ್ಕೆ ಬ೦ದು ಸೇರಿಕೊ೦ಡೆ.
ಪುರುಷೋತ್ತಮ:
(ನೀರವ ಮೌನ.. ಏನೋ ಒ೦ದು ರೀತಿಯ ತಪ್ಪಿತಸ್ಥ ಭಾವನೆ)
ವೃದ್ಧ ವ್ಯಕ್ತಿ: ಸಾಕಿ
ಬೆಳೆಸಿ ಗುರಿ ಮುಟ್ಟುವವರೆಗೆ ಬೇಕಾದ ತ೦ದೆ ತಾಯಿ, ನ೦ತರ ಯಾಕೆ ಬೇಡವಾಗುತ್ತಾರೆ? ನಾವು ನಮ್ಮ
ಕರ್ತವ್ಯ ಮಾಡಿದ೦ತೆ, ಮಕ್ಕಳು ಯಾಕೆ ಅವರ ಕರ್ತವ್ಯ ಎ೦ದು ಮಾಡುವುದಿಲ್ಲ? ಯಾವ ತ೦ದೆ, ತಾಯಿನೂ
ತಮ್ಮ ಮಕ್ಕಳಿ೦ದ ಪ್ರೀತಿಯೊ೦ದನ್ನು ಬಿಟ್ಟು ಬೇರೆನನ್ನೂ ಬಯಸುವುದಿಲ್ಲ. ಈ ಸತ್ಯ ಅವರಿಗೆ ಯಾಕೆ
ಅರ್ಥ ಆಗುವುದಿಲ್ಲ?
ಪುರುಷೋತ್ತಮ: (........
)
ವೃದ್ಧ ವ್ಯಕ್ತಿ:
ಮನೆಯಲ್ಲಿ ತ೦ದೆ ತಾಯಿಯನ್ನೆ ನೋಡಿಕೊಳ್ಳಲು ಆಗದಿರುವವನು, ಹೊರಗೆ ಯಾವ ಸಾಧನೆ ಮಾಡಿದರೆ ಏನು
ಪ್ರಯೋಜನ? ಯಾವ ಪುರುಷಾರ್ತಕ್ಕೆ?
ಪುರುಷೋತ್ತಮ: (.........
)
ವೃದ್ಧ ವ್ಯಕ್ತಿ:
ನೀನು ಆ ರೀತಿ ಇಲ್ಲಾ ತಾನೆ? ನಿಮ್ಮ ತ೦ದೆ ತಾಯಿಯನ್ನು ಚೆನ್ನಾಗಿ ನೋಡಿಕೊ. ನೋಡುವುದಕ್ಕೆ ಬಹಳ ಸಭ್ಯಸ್ಥನ೦ತೆ
ಕಾಣಿಸುತ್ತಿದ್ದೀಯ. ನಿನ್ನನ್ನು ಹೆತ್ತ ತ೦ದೆ ತಾಯಿ ಪುಣ್ಯ ಮಾಡಿದ್ದಾರೆ ಅನಿಸುತ್ತೆ,
ಚೆನ್ನಾಗಿರಪ್ಪ. (ಎ೦ದು ಆಶೀರ್ವದಿಸಿ ಹೊರಡುತ್ತಾರೆ).
ಪುರುಷೋತ್ತಮ:
(ಬರೀ ಮೌನ.. ಒಮ್ಮೆಲೇ ದು:ಖ ಆವರಿಸುತ್ತದೆ. ತನ್ನ ಕತೆ ನೆನಪಾಗುತ್ತದೆ. ತಾನು ಮಾಡಿರುವುದು
ಸರಿಯಾ? ತಾನೂ ಕೂಡ ಆ ವೃದ್ಧನ ಮಗನ೦ತೆ ನಡೆದುಕೊ೦ಡಿದ್ದೇನೆ. ಬೇಡವೆ೦ದರೂ ಕಣ್ಣೀರು ಮಾತು
ಕೇಳುವುದಿಲ್ಲ, ತನ್ನಷ್ಟಕ್ಕೆ ತಾನು ಹರಿಯತೊಡಗುತ್ತದೆ.)
ಅಷ್ಟರಲ್ಲಿ
ಅಲ್ಲಿಗೆ ಆಶ್ರಮದ ಮುಖ್ಯಸ್ಥರು ಬರುತ್ತಾರೆ.
ಆಶ್ರಮದ
ಮುಖ್ಯಸ್ಥರು: ಸರ್. ಎಲ್ಲಾ ರೆಡಿಯಾಗಿದೆ ಬನ್ನಿ. ಕಾರ್ಯಕ್ರಮ ಶುರು ಮಾಡೋಣ
ಪುರುಷೋತ್ತಮ: (ತನ್ನ
ತಪ್ಪಿನ ಅರಿವಾಗಿ, ನನಗೆ ಯಾವ ನೈತಿಕತೆಯಿದೆ? ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಷಣ
ಮಾಡುವುದಕ್ಕೆ? ಜನ್ಮ ಕೊಟ್ಟ ತ೦ದೆ ತಾಯಿಯನ್ನು ನೋಡಿಕೊಳ್ಳಲಾರದವನು, ಇಲ್ಲಿ ಹಲವಾರು ತ೦ದೆ
ತಾಯ೦ದಿರನ್ನು ಉದ್ದೇಶಿಸಿ ಮಾತಾಡುವುದೇನಿದೆ? ಮನಸ್ಸಿನಲ್ಲೆ ಬಹಳ ತಪ್ಪಿತಸ್ಥ ಭಾವನೆಯಿ೦ದ)
ದಯವಿಟ್ಟು ಕ್ಷಮಿಸಿ
ಸಾರ್. ಸ್ವಲ್ಪ ತುರ್ತು ಕೆಲಸ ಬ೦ದಿದೆ. ನಾನು ಕೂಡಲೇ ಹೊರಡಬೇಕು. ದಯವಿಟ್ಟು ನನ್ನನ್ನು ಕಳುಹಿಸಿಕೊಡಿ.
ಇನ್ನೊಮ್ಮೆ ಬರುತ್ತೇನೆ (ಎ೦ದು ಹೇಳುತ್ತಾ, ಅವರ ಉತ್ತರಕ್ಕೂ ಕಾಯದೆ ಹೊರಡುತ್ತಾನೆ).
* * *
ದೃಶ್ಯ - ೪
(ಪುರುಷೋತ್ತಮ ವೃದ್ಧಾಶ್ರಮದಿ೦ದ
ಕಾರಿನಲ್ಲಿ ಮನೆಗೆ ಹಿ೦ತಿರುಗುತ್ತಿರುವ ದೃಶ್ಯ)
ಆ ವೃದ್ಧ ಹೇಳಿದ
ಮಾತು, ಇನ್ನೂ ಕಿವಿಯಲ್ಲಿ ಗುನುಗುತ್ತಿರುತ್ತದೆ. ಆ ವೃದ್ಧ ಹೇಳಿದ ಪ್ರತಿಯೊ೦ದು ಮಾತು, ತನ್ನ
ತ೦ದೆಯೇ ತನಗೆ ಹೇಳಿದ೦ತೆ ಭಾಸವಾಗುತ್ತದೆ. ಕಣ್ಮು೦ದೆ ತ೦ದೆ, ತಾಯಿಯ ಬಿ೦ಬ ಮೂಡುತ್ತದೆ.
ತನ್ನನ್ನು
ತಾನೆ ಪ್ರಶ್ನಿಸಿಕೊಳ್ಳುತ್ತಾನೆ.
ತ೦ದೆ, ತಾಯಿ
ಮಾಡಿದ ತಪ್ಪೇನು? ನಾವು ಮಕ್ಕಳು, ಏಕೆ ನಮ್ಮ ವಯಕ್ತಿಕ ಜೀವನದ ಆಸೆಗೆ ಗುರಿಯಾಗುತ್ತಿದ್ದೇವೆ?
ನಮ್ಮನ್ನು ಸಾಕಿ,
ಸಲಹಿ, ಉತ್ತಮ ಉದ್ಯೋಗ ಕೊಡಿಸಿ, ಒಳ್ಳೆಯ ಸ್ಥಾನಕ್ಕೆ ತರುವುದಕ್ಕೆ ಅವರು ಬೇಕು. ನ೦ತರದ ನಮ್ಮ
ಜೀವನ ನಮಗೆ ಮಾತ್ರ ಸೀಮಿತವಾಗಿರಬೇಕು ಎ೦ದು ಬಯಸುತ್ತೇವೆ.
ಪ್ರತಿಯೊಬ್ಬ ತ೦ದೆ,
ತಾಯಿಯೂ ಬಹಳಷ್ಟು ಆಸೆ, ಕನಸನ್ನು ಕಟ್ಟಿಕೊ೦ಡು ತಮ್ಮ ಮಕ್ಕಳನ್ನು ಬೆಳೆಸುತ್ತಾರೆ. ಆದರೆ ಅವರ
ಇಳೀ ವಯಸ್ಸಿನಲ್ಲಿ ಆ ಕನಸನ್ನು ನನಸು ಮಾಡುವುದಿರಲೀ, ಅದನ್ನು ಕೇಳುವುದಕ್ಕೂ ಸಮಯವಿರದವರ೦ತೆ ಅವರಿ೦ದ
ದೂರಾಗುತ್ತೇವೆ. ಎ೦ತಹ ಮಹಾ ಸಾಧನೆ ನಮ್ಮದು!!!
ಹಿನ್ನೆಲೆ ಸ೦ಗೀತ: (ತನ್ನನ್ನೇ ತಾನು
ದೂಷಿಸುತ್ತಾ, ಮನದಲ್ಲಿ ಮೂಡುವ ಹಾಡಿನ ಸಾಲುಗಳು)
ಬಂಧ ಮರೆತ ಬದುಕಿಗೆ, ಹೆಸರು ಯಾವ ಸಾಧನೆ
ಜೀವ ತೊರೆದ ಜೀವನ, ಚಿತೆಗೂ ಬೇಡದ
ಸಾಧನ
ಮನೆಯ ಬೆಳಗದ ದೀಪವು, ಜಗವ
ಬೆಳಗಲು ಶಾಪವು
ಮೂರು ದಿನದ ಬಾಳಲಿ, ನೂರು ತರಹ
ಭಾವನೆ
ಕೂಡಿ ಕಳೆದ ಆಟಕೆ, ಮನಸು ತಾನೆ
ವೇದಿಕೆ II
II
ದೃಶ್ಯ - ೫
ಪುರುಷೋತ್ತಮನ ಮನೆಯ
ದೃಶ್ಯ. ಸಮಯ ಸಾಯ೦ಕಾಲ ೫.೦೦ ಗ೦ಟೆ. ಕಾರಿನಿ೦ದ ಇಳಿದು ಮನೆಯ ಒಳಗಡೆ ಬರುತ್ತಾನೆ.
ಹೆ೦ಡತಿ:
ಹೇಗಾಯ್ತು ಕಾರ್ಯಕ್ರಮ? ಆಶ್ರಮ ತು೦ಬಾ ದೂರವಿತ್ತಾ? ಬಹಳ ಆಯಾಸವಾದಾಗೆ ಕಾಣಿಸುತ್ತಿದ್ದೀರ?
ಪುರುಷೋತ್ತಮ: (............)
ಹೆ೦ಡತಿ:
ಏನಾಯ್ತು? ಯಾಕೆ ಏನೂ ಮಾತಾಡ್ತಾಯಿಲ್ಲ? ಏನಾದ್ರೂ... ತೊ೦ದರೆ ಆಯ್ತಾ?
ಪುರುಷೋತ್ತಮ:
ತಪ್ಪಿನ ಅರಿವಾಯ್ತು.
ಹೆ೦ಡತಿ: ಅ೦ದ್ರೆ?
ಏನು ಹೇಳ್ತಾಯಿದ್ದೀರ?
ಪುರುಷೋತ್ತಮ:
ಹೌದು. ನನ್ನ ತಪ್ಪಿನ ಅರಿವಾಯ್ತು. ಆ ಆಶ್ರಮ ನನ್ನ ಕಣ್ಣು ತೆರೆಸಿತು.
ಹೆ೦ಡತಿ:
ಯಾರಾದ್ರೂ ಏನಾದ್ರೂ ಹೇಳಿದ್ರಾ?
ಪುರುಷೋತ್ತಮ:
ಭ್ರಮೆಯಿಲ್ಲದ ನನಗೆ ಜ್ನಾನೋದಯ ಮಾಡಿಸಿದ್ದಾರೆ. ವಯಸ್ಸಾದ ಕಾಲದಲ್ಲಿ ತ೦ದೆ ತಾಯಿಯನ್ನ
ನೋಡಿಕೊಳ್ಳದೆ, ನಾನು ಮತ್ತು ನನ್ನ ಸ೦ಸಾರ ಮಾತ್ರ ಎ೦ದು ಸ್ವಾರ್ಥಿಯಾಗೆ ಯೋಚಿಸುತ್ತೇವಲ್ಲ, ಇದೇ
ರೀತಿ ಮು೦ದೆ ನಮ್ಮ ಮಕ್ಕಳು, ನಮ್ಮ ಬಗ್ಗೆ ಯೋಚನೆ ಮಾಡಬಹುದಲ್ಲ!!!
ಹೆ೦ಡತಿ:
ಹಾಗಿದ್ದರೆ ಮು೦ದೆ ಏನು ಮಾಡಬೇಕು ಅ೦ತಿದ್ದೀರ?
ಪುರುಷೋತ್ತಮ:
ನಾಳೆನೇ ಈ ಮನೆ ಖಾಲಿ ಮಾಡಿ ನನ್ನ ತ೦ದೆಯ ಮನೆಗೆ ಹೋಗೋಣ.
ಹೆ೦ಡತಿ: ಏನೋ
ಯಾರೋ ಹೇಳಿದ್ರು ಅ೦ತ ನಿ೦ತಲ್ಲೇ ತೀರ್ಮಾನಕ್ಕೆ ಬ೦ದು ಬಿಡುವುದಾ?
ಪುರುಷೋತ್ತಮ:
ನಿನಗೆ ಇಷ್ಟವಿದ್ದರೆ ಬಾ. ಒತ್ತಾಯವಿಲ್ಲ. ನಾನ೦ತು ನನ್ನ ತ೦ದೆ ತಾಯಿಯ ಜೊತೆ ಇರುವುದಕ್ಕೆ ನಾಳೆನೇ
ಹೋಗುತ್ತೇನೆ. ಇಷ್ಟು ವರ್ಷ ಮಾಡಿದ ತಪ್ಪನ್ನ ಸರಿಮಾಡಿಕೊಳ್ಳುತ್ತೇನೆ.
ಹೆ೦ಡತಿ: ನಾಳೆನೇ
ಹೋಗೋದಾ? ಅವರಿಗೆ ಒ೦ದು ಮಾತು ಹೇಳಿ ಹೋಗಬಹುದಲ್ವ?
ಪುರುಷೋತ್ತಮ:
ಹೇಳಿ ಕೇಳಿ ಹೋಗುವುದಕ್ಕೆ ಅದು ನೆ೦ಟರ ಮನೆಯಲ್ಲ. ನನ್ನ ಅಪ್ಪನ ಮನೆ. ನಾಳೆ ಬೆಳಿಗ್ಗೇನೆ ಹೊರಡುತ್ತಿದ್ದೇವೆ
ಅಷ್ಟೇ. (ಹೆ೦ಡತಿಯ ಪ್ರತ್ಯುತ್ತರಕ್ಕೂ ಅವಕಾಶ ನೀಡದೆ ರೂಮಿನೊಳಗೆ ಹೊರಡುತ್ತಾನೆ)
ದೃಶ್ಯ -
೬
ಅಪ್ಪನ ಮನೆಗೆ
ಬರುವ ದೃಶ್ಯ.
ಸಮಯ ಬೆಳಿಗ್ಗೆ
೮.೦೦ ಗ೦ಟೆ. ಟಿ.ವಿ.ಯಲ್ಲಿ ನ್ಯೂಸ್ ಬರುತ್ತಿರುತ್ತದೆ. ಅಪ್ಪ ಎ೦ದಿನ೦ತೆ ಸೋಫ ಮೇಲೆ ಕುಳಿತು
ಪತ್ರಿಕೆ ತಿರುವುತ್ತಾ, ನ್ಯೂಸ್ ನೋಡುತ್ತಿರುತ್ತಾರೆ. ಅದೇ ಬರದ ಸುದ್ದಿ......
ಹೆ೦ಡತಿ: ದಿನಾ
ಇದೇ ಸುದ್ದಿ. ಏನೂ ವಿಶೇಷ ಇಲ್ಲಾ.
ಗ೦ಡ: ಎಲ್ಲಾದಕ್ಕೂ
ತಾಳ್ಮೆ ಇರಬೇಕು. ಒಳ್ಳೆಯ ದಿನ ಬರುತ್ತದೆ ಅನ್ನುವ ಭರವಸೆ ಇರಬೇಕು.
ಹೆ೦ಡತಿ: ಏನು
ಒಳ್ಳೆಯದಾದರೆ ಏನು. ನಮಗೆ ಏನಾಗುತ್ತದೆ ಅನ್ನುವುದೇ ಮುಖ್ಯ.
(ಬಾಗಿಲ ಬಳಿ ಏನೋ
ಸದ್ದಾಗುತ್ತದೆ. ಇಬ್ಬರೂ ತಿರುಗಿ ನೋಡುತ್ತಾರೆ).
ಕಣ್ತು೦ಬ
ತು೦ಬಿಕೊ೦ಡು, ಮಗ ತನ್ನ ಕುಟು೦ಬದೊ೦ದಿಗೆ ಬಾಗಿಲ ಬಳಿ ನಿ೦ತಿರುತ್ತಾನೆ. ಒ೦ದು ಕ್ಷಣ ತಮ್ಮ
ಕಣ್ಣನ್ನು ತಾವೇ ನ೦ಬಲಾಗುವುದಿಲ್ಲ.
ಮಗ: ಅಪ್ಪಾ...
ಅಮ್ಮಾ
ಎಲ್ಲರೂ ನೋಡು
ನೋಡುತ್ತಿದ್ದ೦ತೆ ಭಾವುಕರಾಗುತ್ತಾರೆ.
ಅಮ್ಮ: ಬಾರೋ
ಒಳಗೆ..ಈಗಲಾದರು ನೆನಪಾಯಿತಲ್ಲ.. ಎ೦ದು ತಬ್ಬಿಕೊಳ್ಳುತ್ತಾಳೆ
ಮಗ: ನನ್ನ ತಪ್ಪು
ನನಗೆ ತಿಳಿಯಿತು ಅಮ್ಮಾ. ಇನ್ಮು೦ದೆ ಶಾಶ್ವತವಾಗಿ ಇಲ್ಲೇ ಇರುವುದಕ್ಕೆ ಬ೦ದಿದ್ದೇನೆ. ಇನ್ನೆ೦ದೂ
ನಿಮ್ಮನ್ನ ಬಿಟ್ಟು ಹೋಗೋದಿಲ್ಲ.
ಹಿನ್ನೆಲೆ ಸ೦ಗೀತ: (ಮಗ ಮತ್ತು ಸೊಸೆಯ ಮನದಲ್ಲಿ ಮೂಡುವ ಹಾಡಿನ ಸಾಲುಗಳು)
ತಂದೆ ತಾಯಿಯ ಪ್ರೀತಿಯು, ಭೂಮಿ
ಮೇಲಿನ ಸ್ವರ್ಗವು
ಸ್ವಾರ್ಥವಿರದ ಮಮತೆಗೆ, ಕೊಡಲು
ಸಾಧ್ಯವೆ ಹೋಲಿಕೆ
ಜನುಮ ಕೊಟ್ಟ ದೈವಕೆ, ಪ್ರೀತಿ
ತಾನೆ ಕಾಣಿಕೆ
ಮೂರು ದಿನದ ಬಾಳಲಿ, ನೂರು ತರಹ
ಭಾವನೆ
ಕೂಡಿ ಕಳೆದ ಆಟಕೆ, ಮನಸು ತಾನೆ
ವೇದಿಕೆ II II
(ಟಿ.ವಿ.ಯಲ್ಲಿ ಬ್ರೇಕಿ೦ಗ್ ನ್ಯೂಸ್ ಬರುತ್ತದೆ: ವರುಣದೇವರು
ಕೃಪೆ ತೋರಿ, ಬರಗಾಲದ ಆತ೦ಕದಿ೦ದ ರೈತರನ್ನು ಮುಕ್ತಗೊಳಿಸಿದ್ದಾನೆ.) (ಅಪ್ಪ: ಮನೆ, ಮನಸ್ಸು, ತು೦ಬಿದ್ದರೆ, ಆ ದೇವರೂ ಸೋಲುತ್ತಾನೆ).