tag line

ಸುಮ್ ಸುಮ್ನೆ................!!!

ಮಂಗಳವಾರ, ಅಕ್ಟೋಬರ್ 15, 2019

ರಂಗಿತರಂಗ


ಶುಭ ಶುಕ್ರವಾರ. ಒಂದು ವಾರದ ಬಳಿಕ ಕಛೇರಿಗೆ ಹೊರಟಿದ್ದೆ. ಬಹಳ ಖುಷಿಯಿಂದಲೇ ಸಮಯಕ್ಕಿಂತ ಸ್ವಲ್ಪ ಮುಂಚಿತವಾಗಿಯೇ ಸಿದ್ದವಾದೆ. ದಾರಿಯಲ್ಲಿ ಗಣೇಶನಿಗೊಂದು ನಮಸ್ಕಾರ ಹಾಕಿ ಕಛೇರಿಯತ್ತ ನಡೆದೆ. ಹೊರಗೆ ತಣ್ಣನೆಯ ಗಾಳಿ ಬೀಸುತ್ತಿದ್ದರಿಂದ ವಾತಾವರಣ ಬಹಳ ಹಿತವಾಗಿತ್ತು. ಮನಸ್ಸು ಸಂತೋಷದಿಂದ ಕುಣಿದಾಡುತ್ತಿತ್ತು. ಎಲ್ಲರನ್ನೂ ನೋಡಬೇಕು, ಅವರೊಂದಿಗೆ ಹರಟಬೇಕು ಎಂದು ಲೆಕ್ಕ ಹಾಕುತ್ತಲೇ ಕಛೇರಿ ತಲುಪಿದೆ.

ಬಹಳ ದಿನಗಳ ನಂತರ ಎಲ್ಲರನ್ನೂ ನೋಡುತ್ತಿದ್ದಂತೆ ಉತ್ಸಾಹದಿಂದ ಮಾತನಾಡಲು ಮುಂದಾದೆ. ಆದರೆ ಯಾರೊಬ್ಬರೂ ನನ್ನನ್ನು ಮಾತನಾಡಿಸಲಿಲ್ಲ. ನೋಡಿದರೂ ನೋಡದವರಂತೆ ತಮ್ಮ ಕೆಲಸದಲ್ಲಿ ಮಗ್ನರಾದರು.

ಪ್ರತೀ ಸಲ ನಾನು ಕಛೇರಿಗೆ ಹೋದಾಗಲೆಲ್ಲಾ ಒಂದಲ್ಲಾ ಒಂದು ರೀತಿಯ ಬೇಸರದ ಸಂಗತಿ ನಡೆಯುತ್ತಿತ್ತು. ಯಾವುದಕ್ಕೂ ಬೇಜಾರು ಮಾಡಿಕೊಳ್ಳದೆ ಎಲ್ಲರೊಂದಿಗೂ ಮುಗುಳುನಗೆಯಿಂದಲೇ ಮಾತನಾಡುತ್ತಿದ್ದೆ. ಆದರೆ ಈ ದಿನ ಮಾತ್ರ ನನ್ನ ತಾಳ್ಮೆಯು ಮಿತಿಮೀರಿದಂತೆ ಭಾಸವಾಯಿತು. ನನ್ನಿಂದ ದುಃಖ ತಡೆಯಲಾಗಲಿಲ್ಲ. ಬಹಳ ಹೊತ್ತು ಅಳುತ್ತಲೇ ಇದ್ದೆ.

ನನಗೆ ಏಕೆ ಈ ರೀತಿ ಆಗುತ್ತಿದೆ. ನನ್ನನ್ನು ಏಕೆ ತಮ್ಮಲ್ಲಿ ಒಬ್ಬರಂತೆ ಯಾರೂ ನೋಡುತ್ತಿಲ್ಲ. ನನ್ನನ್ನು ನೋಡಿದರೆ ಸಾಕು, ’ಏನೋ ನೋಡಬಾರದ್ದನ್ನು ನೋಡಿದವರಂತೆ ಪ್ರತಿಕ್ರಿಯಿಸುತ್ತಾರೆ. ನಾನೇನು ತಪ್ಪು ಮಾಡಿರುವೆ?

ಒಬ್ಬರು ಹೇಳುತ್ತಾರೆ, ನೀನು ಬರುವ ದಿನ ಮುಂಚಿತವಾಗಿ ತಿಳಿದಿದ್ದರೆ, ನಾನು ರಜೆ ಹಾಕುತ್ತಿದ್ದೆ. ನಿನ್ನನ್ನು ನೋಡುವ ಕರ್ಮವಾದರೂ ತಪ್ಪುತ್ತಿತ್ತುಎಂದು.

ಈ ಮಾತು ಕೇಳುತ್ತಿದ್ದಂತೆ ನನ್ನ ದು:ಖ ಹಿಮ್ಮಡಿಯಾಯಿತು. ಎಂತಹ ಜನ ಇವರು? ಎಷ್ಟು ಕಠೋರವಾಗಿ ಮಾತನಾಡುತ್ತಾರೆ? ಇವರಂತೆ ನನಗೂ ಒಂದು ಮನಸ್ಸಿದೆ, ಅದಕ್ಕೂ ನೋವಾಗುತ್ತದೆ ಎನ್ನುವ ಅರಿವೆಯೂ ಇಲ್ಲ.  

ಇದೇ ಮಾತನ್ನು, ನಾನು ಅವರಿಗೆ ಹೇಳಿದರೆ!!! ನನಗೂ ಮಾತನಾಡಲು ಬರುತ್ತದೆ! ಆದರೆ ಒಬ್ಬರಿಗೆ ನೋವು ಕೊಟ್ಟು, ಸಂಭ್ರಮಿಸುವ ಬದಲು ಮೌನವೇ ಲೇಸು ಎಂದು ಪ್ರತೀಬಾರಿ ಸುಮ್ಮನಾಗುತ್ತೇನೆ.


ನಾನೇನೂ ಕಛೇರಿಗೆ ದಿನಾ ಬರುವುದಿಲ್ಲ. ವಾರಕ್ಕೆ, ಅಥವಾ ಹದಿನೈದು ದಿನಕ್ಕೆ ಒಮ್ಮೆ ಬರುತ್ತೇನೆ. ಅಪರೂಪಕ್ಕೆ ಬಂದರೂ, ಇವರ ಈ ರೀತಿಯ ವರ್ತನೆ ನೋಡಿ ಬೇಸರವಾಗುತ್ತದೆ.

ನಾನೇನು ಇವರ ಕೆಲಸ ಕಸಿದುಕೊಳ್ಳಲು ಬಂದಿರುವೆನೇ? ಅಥವಾ ಇವರ ಆಸ್ತಿಯೇನಾದರೂ ಬರೆಸಿಕೊಳ್ಳಲು ಬಂದಿದ್ದೇನೆಯೇ? ಯಾಕೆ ಈ ರೀತಿ ವಿಚಿತ್ರವಾಗಿ ನಡೆದುಕೊಳ್ಳುತ್ತಾರೋ ತಿಳಿಯುತ್ತಿಲ್ಲ.

ಒಬ್ಬರು, ನಿನ್ನನ್ನು ತುಂಡು, ತುಂಡಾಗಿ ಕತ್ತರಿಸಿ ಹಾಕಬೇಕು ಎಂದರೆ, ಮತ್ತೊಬ್ಬರು, ನಿನ್ನನ್ನು ಸುಟ್ಟು ಹಾಕಬೇಕು ಎನ್ನುತ್ತಾರೆ.

ಇವರೇನು ಮನುಷ್ಯರಾ? ರಾಕ್ಷಸರಾ? ಇವರಿಗೂ ಯಾರಾದರೂ ಇದೇ ರೀತಿ ಹೇಳಿದರೆ, ಸಹಿಸಿಕೊಳ್ಳುತ್ತಾರಾ? ನನ್ನ ಮೇಲೆ ಏಕಿಷ್ಟು ದ್ವೇಷ ಎಂದು ತಿಳಿಯುತ್ತಿಲ್ಲ. ಒಬ್ಬರನ್ನು ಕೊಲೆ ಮಾಡುವುದು ಎಂದರೆ, ಅಷ್ಟು ಸುಲಭವೇ? ಆ ರೀತಿ ಮಾತನಾಡುವುದಾದರೂ ಎಷ್ಟು ಸರಿ?

ಈ ಸಲ ನನ್ನ ತಾಳ್ಮೆಯೂ ಸಾಕೆನಿಸಿತು. ಇವರೆಲ್ಲಾ ಸರಿಹೋಗುತ್ತಾರೆಂದು ಕಾಯುವುದರಲ್ಲಿ ಅರ್ಥವಿಲ್ಲ ಎನಿಸಿತು. ಗಟ್ಟಿ ಮನಸ್ಸು ಮಾಡಿ ಎಲ್ಲರನ್ನೂ ಕಾರಣ ಕೇಳಿಯೇಬಿಟ್ಟೆ!


ಎಲ್ಲರಿಂದಲೂ ಬಂದ ಉತ್ತರ ಒಂದೇ, ನಿನ್ನ ಬಣ್ಣ ಸರಿಯಿಲ್ಲ, ಮಾತನಾಡುವುದಿರಲಿ, ನಿನ್ನನ್ನು ನೋಡಲೂ ಸಾಧ್ಯವಿಲ್ಲ ಎಂದು.

ಅರೆ! ದೇವರು ಕೊಟ್ಟ ಬಣ್ಣ. ನಾನೇನು ಮಾಡಲಿ? ಬದಲಾಯಿಸಲು ಸಾಧ್ಯವೇ?  

ನಾನು ಎಂದಾದರೂ ಇವರ ಬಣ್ಣದ ಬಗ್ಗೆ ಮಾತಾಡಿರುವೆನಾ? ಇವರೇನು ತಮಗೆ ತಾವೇ ಸೌಂದರ್ಯದ ಖನಿಗಳೆಂದು ತಿಳಿದಿದ್ದಾರೆಯೇ?

ಎಲ್ಲರಿಗೂ ಎಲ್ಲರೂ ಇಷ್ಟವಾಗಬೇಕೆಂದಿಲ್ಲ. ಹಾಗೆಂದು ಇನ್ನೊಬ್ಬರನ್ನು ಅವಮಾನಿಸುವುದು ಸರಿಯಲ್ಲ.

ಈ ಪ್ರಪಂಚದಲ್ಲಿ ಎಲ್ಲರೂ ಸಹಬಾಳ್ವೆಯಿಂದ ಬದುಕಬೇಕು. ಎಲ್ಲರಿಗೂ ಅವರದೇ ಆದ ವ್ಯಕ್ತಿತ್ವವಿದೆ. ಎಲ್ಲರ ಭಾವನೆಯನ್ನೂ ಸಮಾನವಾಗಿ ಗೌರವಿಸಬೇಕು. ಇನ್ನೊಬ್ಬರನ್ನು ಟೀಕಿಸುವ ಬದಲು ತಮ್ಮನ್ನು ತಾವು ಆ ಜಾಗದಲ್ಲಿ ನಿಲ್ಲಿಸಿ ಪ್ರಶ್ನಿಸಿಕೊಳ್ಳಬೇಕು. ಆದರೆ ಈ ಜನರು ಬದಲಾಗುವುದಿಲ್ಲ. ತಮ್ಮ ಧೋರಣೆಯನ್ನು ನಿಲ್ಲಿಸುವುದಿಲ್ಲ.

ಇವರಲ್ಲಿ ಏಕೆ ನಾನು ಬೇಡಿಕೊಳ್ಳಬೇಕು? ನಾನು ಇರುವ ರೀತಿಯಲ್ಲೆ ಚೆನ್ನಾಗಿರುವೆ. ಯಾರು ಮಾತನಾಡಿಸಲಿ, ಬಿಡಲಿ, ನನಗೇನಾಗಬೇಕು? ನಾನು ಇರುವಂತೆ ಯಾರು ನನ್ನನ್ನು ಒಪ್ಪಿಕೊಳ್ಳುತ್ತಾರೊ, ಅವರೊಂದಿಗೆ ಬೆರೆತರಾಯಿತು. ಇನ್ನು ನಾನು ದು:ಖಿಸಬಾರದು.

ಚಿಂತೆ ಮಾಡುತ್ತಾ ಇದ್ದರೆ, ಚಿತೆಗೇ ದಾರಿ. ಅದರ ಬದಲು, ಚಿಂತನೆ ಮಾಡಿದರೆ ಜೀವನದಲ್ಲಿ ಏನಾದರೂ ಸಾಧಿಸಬಹುದು.


 ಇನ್ನು ಮುಂದೆ, ವಾರಕ್ಕೊಮ್ಮೆ ಕಛೇರಿಗೆ ನನ್ನ ಹಾಜರಿ ಖಾಯಂ ..............