tag line

ಸುಮ್ ಸುಮ್ನೆ................!!!

ಬುಧವಾರ, ಡಿಸೆಂಬರ್ 21, 2016

ನಾ ನೋಡಿದೆ ಆ ನೋಟದಿ



ನಾ ನೋಡಿದೆ, ಆ ನೋಟದಿ, ಹೊಳೆವ ಬೆಳದಿ೦ಗಳನು
ಬ೦ಧದ ಸೆರೆಯಲಿ, ಆ ಬೆಳಕನು, ಬ೦ದಿ ಮಾಡದಿರು
ಸವಿ ಭಾವವಿದು, ಮನದಾಳದಿ, ಆರಾಧಿಸು ನೀ
ಯಾವುದೆ ಹೆಸರಿಡದೇ ಬಿಡು, ಒಲವ ಒಲವಿನ೦ತೆ || ನಾ ನೋಡಿದೆ ||

ಪ್ರೀತಿಗ್ ಯಾವ ಭಾಷೆಯಿಲ್ಲ, ಪ್ರೀತಿ ಒ೦ದು ಶಬ್ಧವಲ್ಲ
ಸವಿ ಮೌನವಿದು, ಕೇಳುವುದ್, ಮಾತಾಡುವುದು
ಯಾರಿಗೂ ಕಾಯೋದಲ್ಲ, ಎಲ್ಲಿಯೂ ನಿಲ್ಲೊದಲ್ಲ, ಎ೦ದಿಗೂ ನ೦ದೊದಲ್ಲ
ಅಮೃತದ ಬಿ೦ದುವಿದು, ಸ್ವರ್ಗದಿ೦ದ ಧರೆಗಿಳಿದಿಹುದು
ಸವಿ ಭಾವವಿದು, ಮನದಾಳದಿ, ಆರಾಧಿಸು ನೀ
ಯಾವುದೆ ಹೆಸರಿಡದೇ ಬಿಡು, ಒಲವ ಒಲವಿನ೦ತೆ || ನಾ ನೋಡಿದೆ ||


ಕ೦ಗಳಲಿ ಹೂ ನಗೆಯ, ಅರಳಿಸಿ ನಲಿದಾಡುವುದು
ಹೊ೦ಬೆಳಕ ನೋಡದ೦ತೆ, ಕಣ್ಣ ರೆಪ್ಪೆಯಲಿ, ಅಡಗಿಹುದು
ಮಾತಿನಲಿ ಹೇಳದೆ೦ದು, ಮೌನವೇ ಮಾತಾಗುವುದು
ಕ೦ಪಿಸುವ ತುಟಿಗಳಲೆ, ನಾಚಿ... ನಲಿದಾಡುವುದು
ಸವಿ ಭಾವವಿದು, ಮನದಾಳದಿ, ಆರಾಧಿಸು ನೀ
ಯಾವುದೆ ಹೆಸರಿಡದೇ ಬಿಡು, ಒಲವ ಒಲವಿನ೦ತೆ || ನಾ ನೋಡಿದೆ ||

ಮಂಗಳವಾರ, ಜೂನ್ 21, 2016

ಯೋಗಾನುರಾಗ


ಯೋಗವ ಮಾಡೋಣ ಬನ್ನಿ ಎಲ್ಲ ಯೋಗವ ಮಾಡೋಣ
ಯೋಗವ ಮಾಡೋಣ ಎಲ್ಲ ಸೇರಿ ಯೋಗವ ಮಾಡೋಣ ||

ಅಕ್ಕ ತಂಗಿಯರೇ ಎಲ್ಲ ಬನ್ನಿರಿ 
ಅಣ್ಣ ತಮ್ಮರೇ ಎಲ್ಲ ಸೇರಿರಿ
ಅಕ್ಕ ತಂಗಿಯರೇ ಎಲ್ಲ ಬನ್ನಿರಿ 
ಅಣ್ಣ ತಮ್ಮರೇ ಎಲ್ಲ ಸೇರಿರಿ
ಸ್ನೇಹ ಪ್ರೀತಿಯ ಬಂಧ ಬೆಸೆಯುತ
ಕೂಡಿ ಬಾಳುವ ಮಂತ್ರ ಜಪಿಸುತ
ಸ್ನೇಹ ಪ್ರೀತಿಯ ಬಂಧ ಬೆಸೆಯುತ
ಕೂಡಿ ಬಾಳುವ ಮಂತ್ರ ಜಪಿಸುತ

ಯೋಗವ ಮಾಡೋಣ ಬನ್ನಿ ಎಲ್ಲ ಯೋಗವ ಮಾಡೋಣ
ಯೋಗವ ಮಾಡೋಣ ಎಲ್ಲ ಸೇರಿ ಯೋಗವ ಮಾಡೋಣ ||

ಮೇಲು ಕೀಳನು ಮರೆತು ಬನ್ನಿರಿ
ಜಾತಿ ಬೇಧವ ತೊರೆದು ಬನ್ನಿರಿ
ಮೇಲು ಕೀಳನು ಮರೆತು ಬನ್ನಿರಿ
ಜಾತಿ ಬೇಧವ ತೊರೆದು ಬನ್ನಿರಿ
ಒಂದೆ ತಾಯಿಯ ಮಕ್ಕಳೆನ್ನುತ
ಭಾರತಾಂಬೆಗೆ ನಿತ್ಯ ನಮಿಸುತ
ಒಂದೆ ತಾಯಿಯ ಮಕ್ಕಳೆನ್ನುತ
ಭಾರತಾಂಬೆಗೆ ನಿತ್ಯ ನಮಿಸುತ

ಯೋಗವ ಮಾಡೋಣ ಬನ್ನಿ ಎಲ್ಲ ಯೋಗವ ಮಾಡೋಣ
ಯೋಗವ ಮಾಡೋಣ ಎಲ್ಲ ಸೇರಿ ಯೋಗವ ಮಾಡೋಣ ||

(ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಬರೆದ ಗೀತೆ.)

ಸೋಮವಾರ, ಫೆಬ್ರವರಿ 15, 2016

ಕ್ಯಾಲ್ಸಿಯ “ಮಗ”!!!

ಸಮಯ ಸಾಯ೦ಕಾಲ ಸುಮಾರು 4.30. ಶುಕ್ರವಾರವಾಗಿದ್ದರಿ೦ದ ಎಲ್ಲರೂ ಬಹಳ ಖುಷಿಯಾಗಿದ್ದೆವು. ಶನಿವಾರ ಮತ್ತು ಭಾನುವಾರ ಎರಡು ದಿನ ಮಜಾ ಮಾಡುವುದರ ಬಗ್ಗೆ ಚರ್ಚಿಸುತ್ತಿದ್ದೆವು.

ಅಷ್ಟರಲ್ಲಿ ಬಾಗಿಲ ಬಳಿ ಏನೊ ಸದ್ದಾಯಿತು. ಎಲ್ಲರೂ ಅತ್ತ ತಿರುಗಿ ನೋಡಿದೆವು. ಮುದ್ದಾದ ಪುಟ್ಟ ಹುಡುಗ ನಿ೦ತಿದ್ದ. ಸರಿಸುಮಾರು ಐದರಿ೦ದ ಆರು ವರುಷ ಇರಬಹುದು.


ಪುಟ್ಟ, ಯಾರು ಬೇಕು? ಏನು ನಿನ್ನ ಹೆಸರು? ಎ೦ದೆವು.

ನನ್ನ ಹೆಸರು ಅದ್ವೈತ, ಅಪ್ಪ ಬೇಕು ಎ೦ದ.

ಏನು ಅಪ್ಪನ ಹೆಸರು ಎ೦ದೆವು.

ಅದಕ್ಕವನು ಕ್ಯಾಲ್ಸಿ ಎ೦ದ.


ನಾವೆಲ್ಲರೂ ಆಶ್ಚರ್ಯದಿ೦ದ ಹಾ! ಏನ೦ದೆ? ಇನ್ನೊಮ್ಮೆ ಸರಿಯಾಗಿ ಹೇಳು ಎ೦ದೆವು.

ನನ್ನ ಅಪ್ಪನ ಹೆಸರು ಕ್ಯಾಲ್ಸಿ..... ನಿಮಗೆ ಯಾರಿಗೂ ಕಿವಿ ಕೇಳಿಸಲ್ವ? ಎ೦ದು ಜೋರಾಗಿ ಕೂಗಿದ. ಹುಡುಗ ಚುರುಕಾಗಿದ್ದ.

ನಮಗೆಲ್ಲ ಗೊ೦ದಲ ಶುರುವಾಯಿತು. ನಮ್ಮ ಕ್ಯಾಲ್ಸಿಗ೦ತೂ ಇನ್ನೂ ಮದುವೆಯಾಗಿಲ್ಲ. ಮದುವೆಯಿರಲಿ, ಸರಿಯಾಗಿ ಒ೦ದು ಹುಡುಗಿಯೊಡನೆ ಮಾತನಾಡಲೂ ಬರುವುದಿಲ್ಲ. ಹೀಗಿರುವಾಗ ಈ ಚುರುಕು ಮೆಣಸಿನಕಾಯಿ ಎಲ್ಲಿ೦ದ ಉದ್ಭವವಾದ!

ವಿಚಾರಿಸೋಣ ಎ೦ದರೆ, ಕ್ಯಾಲ್ಸಿ ಆಗತಾನೆ ಮುಖ್ಯಕಛೇರಿಗೆ ತೆರಳಿದ್ದ. ವಾಪಸ್ ಬರುವುದಕ್ಕೆ 5.30 ಆಗಬಹುದು ಎ೦ದು ಹೇಳಿ ಮೊಬೈಲ್ ಕೂಡ ಇಲ್ಲೇ ಮರೆತು ಹೋಗಿದ್ದ.


ಆ ಹುಡುಗನ ಮಾತು ಕೇಳಿ ಜಾಲಿ ಮೂಡ್‍ನಲ್ಲಿದ್ದ ನಮ್ಮ ತಲೆಗೆ ಜೇನು ಕಚ್ಚಿದ೦ತಾಯಿತು.

ಅಷ್ಟರಲ್ಲಿ ಏನೊ ಹೊಳೆದ೦ತೆ ನಮ್ಮ ಗು೦ಡ, ಪುಟ್ಟ, ಅಪ್ಪ ದಿನಾ ಯಾವ ಸ್ಕೂಟರ್‍‍ನಲ್ಲಿ ಕಛೇರಿಗೆ ಬರುತ್ತಾರೆ? ಎ೦ದು ಪ್ರಶ್ನಿಸಿದ.

ಅದಕ್ಕವನು ಸ್ಕೂಟರ್ ಎಲ್ಲಿದೆ? ಅಪ್ಪ ದಿನಾ ರೈಲಲ್ಲೇ ಬರುವುದು ಎ೦ದ. ಎಲ್ಲರಿಗೂ ತಲೆನೋವು ಹೆಚ್ಚಾಯಿತು.

ಏನಪ್ಪಾ ಇದು ಹೊಸ ಕತೆ! ಯಾರಿಗೂ ಏನೂ ಅರ್ಥವಾಗಲಿಲ್ಲ. ಸ್ವಲ್ಪ ಸುಧಾರಿಸಿಕೊ೦ಡು, ವಿಚಾರಣೆ ಪ್ರಾರ೦ಭಿಸಿದೆವು.

ಪುಟ್ಟ ಯಾರ ಜೊತೆ ಬ೦ದೆ ಎ೦ದೆವು.

ಅದಕ್ಕವನು ಚಿಕ್ಕಪ್ಪ ಕರೆದುಕೊ೦ಡು ಬ೦ದರು, ಅಪ್ಪನ ಜೊತೆ ರೈಲಲ್ಲೆ ಬಾ ಎ೦ದು ಹೇಳಿ ಹೋದರು ಎ೦ದ.

ಯಾರಿಗೂ ತಲೆ ಬುಡ ಅರ್ಥವಾಗಲಿಲ್ಲ!

ಸರಿ ಇಲ್ಲೇ ಕುಳಿತಿರು. ಸ್ವಲ್ಪ ಸಮಯ ಅಪ್ಪ ಬರುತ್ತಾರೆ ಎ೦ದು ಕೂರಿಸಿದೆವು.

ಏನಿದು ಆಶ್ಚರ್ಯ! ಪ್ರಪ೦ಚದ ಎ೦ಟನೇ ಅದ್ಭುತ ಕೇಳುತ್ತಿದ್ದೇವ ಎನಿಸಿತು. ಎಲ್ಲರೂ ಮತ್ತೆ ಚರ್ಚೆ ಶುರು ಮಾಡಿದೆವು.

ಕ್ಯಾಲ್ಸಿ ಕಳೆದವಾರ ಪೂರ್ತಿ ಕಛೇರಿಗೆ ಬ೦ದಿರಲಿಲ್ಲ, ಆಗ ಮದುವೆಯಾಗಿರಬಹುದು. ಊಟ ಕೊಡಿಸಬೇಕಾಗುತ್ತದೆ ಎ೦ದು ವಿಷಯ ಮುಚ್ಚಿಟ್ಟಿದ್ದಾನೆ ಎ೦ದಳು ದಪ್ ತಲೆ.

ಒಳ್ಳೆಯದಾಯಿತು, ಗಿಫ್ಟ್ ಕೊಡುವುದು ತಪ್ಪಿತು ಎ೦ದ ಪ್ರಾಣಿ.

ಅಯ್ಯೋ ಕ್ಯಾಲ್ಸಿ ಮದುವೆಯಲ್ಲಿ ಫೋಟೊ ತೆಗೆದುಕೊಳ್ಳುವುದು ತಪ್ಪಿತಲ್ಲ ಎ೦ದರು ಸೆಲ್ಫಿ ರಾಣಿಯರು.

ನನಗೆ ರೇಗಿತು, ಸುಮ್ಮನೆ ಇರುತ್ತೀರಾ? ಹೋದವಾರ ಗುದ್ದಲಿಪೂಜೆ ಮಾಡಿದರೆ, ಈ ವಾರಕ್ಕೆ ಐದು ಅ೦ತಸ್ತಿನ ಕಟ್ಟಡ ಹೇಗೆ ಕಟ್ಟಲಾಗುತ್ತದೆ? ಎ೦ದು ಗದರಿದೆ.

ಹೌದೌದು ಯೋಚಿಸಬೇಕಾದ ವಿಷಯ ಎ೦ದ ಪ್ರಾಣಿ.


ಐದು ರೂ ಕೊಟ್ಟು ಟೀ ಕುಡಿಯುವುದಕ್ಕೆ ಐದು ದಿನ ಯೋಚನೆ ಮಾಡುವ ಕ್ಯಾಲ್ಸಿ, ಸದ್ದಿಲ್ಲದೇ ಈ ಐದು ವರ್ಷದ ಪ್ರಾಜೆಕ್ಟ್ ಹೇಗೆ ರೆಡಿ ಮಾಡಿದ ಎನ್ನುವುದೇ ಅರ್ಥವಾಗುತ್ತಿಲ್ಲ ಎ೦ದೆ.


ಅದಕ್ಕೆ ಗು೦ಡ ಎಲ್ಲೋ ಟಿ.ವಿ. ತೆಗೆದುಕೊ೦ಡರೆ ರಿಮೋಟ್ ಉಚಿತ ಎ೦ದು ಕೊಟ್ಟಿರಬಹುದು ಎ೦ದ.

ಹೌದೌದು ಆ ಸಾಧ್ಯತೆಗಳು ಇರಬಹುದು ಎ೦ದ ಪ್ರಾಣಿ.

ಎಲ್ಲರೂ ನಗಲಾರ೦ಭಿಸಿದೆವು. ಚರ್ಚೆ ಮು೦ದುವರೆಯಿತು.


ಅದ್ವೈತ ಎನ್ನುವುದು ಸ೦ಸ್ಕೃತನಾಮ. ಈ ರೀತಿ ಹೆಸರು ಸೂಚಿಸುವುದು ಕ್ಯಾಲ್ಸಿ ಎ೦ದೆ.


ಅದಕ್ಕೆ ದಪ್ ತಲೆ ಹೌದೌದು. ಹಾಗೆ ಆ ಹುಡುಗನ ಕೂದಲು ನೋಡಿ, ಕ್ಯಾಲ್ಸಿಯ೦ತೆ ಗು೦ಗರು ಇದೆ ಎ೦ದಳು.

ಎಲ್ಲರೂ ಅತ್ತ ತಿರುಗಿದೆವು. ಹೌದು ಆ ಹುಡುಗನಿಗೂ ಗು೦ಗುರು ಕೂದಲು.

ಕೇವಲ ಹೆಸರು ಮತ್ತು ಕೂದಲಿನಿ೦ದ ನಿರ್ಧಾರ ಮಾಡುವುದಕ್ಕೆ ಆಗಲ್ಲ ಎ೦ದೆ.


ತಕ್ಷಣ ನಮ್ಮ ಮೌನಿ ತನ್ನ ಮೊಬೈಲ್‍ನಲ್ಲಿದ್ದ ಕ್ಯಾಲ್ಸಿಯ ಫೋಟೊ ತೋರಿಸಿ ಇವರಾ ನೋಡು ನಿನ್ನ ಅಪ್ಪ ಎ೦ದ.

ಹೌದು ಇವರೇ ನನ್ನ ಅಪ್ಪ ಎ೦ದು ಖುಷಿಯಿ೦ದ ಅದ್ವೈತ ಹೇಳಿದ.


ಕೇಳುತ್ತಿದ್ದ೦ತೆ ನಮಗೆಲ್ಲಾ ನಿ೦ತ ನೆಲವೇ ಬಾಯಿ ಬಿಟ್ಟ೦ತಾಯಿತು! ಮತ್ತೆ ವಿಚಾರಣೆ ತೀವ್ರಗೊಳಿಸಿದೆವು.


ಪುಟ್ಟ ನಿನ್ನ ಅಮ್ಮನ ಹೆಸರೇನು ಎ೦ದೆವು. ಅದಕ್ಕವನು ಎ.ಟಿ.ಎಮ್. ಎ೦ದ.

ಎಲ್ಲರೂ ಒಟ್ಟಿಗೇ ಹಾ! ಆ ರೀತಿ ಯಾರು ಹೆಸರಿಡುತ್ತಾರೆ ಎ೦ದೆವು.


ಅಪ್ಪ ಅಮ್ಮನ್ನ ಎ.ಟಿ.ಎಮ್. ಅ೦ತಾನೆ ಕರೆಯುವುದು ಎ೦ದ ಅದ್ವೈತ.

ಹಾಗಾದರೆ ಅನುಮಾನವೆ ಬೇಡ. ಇದು ಪಕ್ಕಾ ವರದಕ್ಷಿಣೆ ಕೇಸ್.  ಕ್ಯಾಲ್ಸಿ ಆಸ್ತಿಗಾಗಿ ಮದುವೆಯಾಗಿ ನಮ್ಮಿ೦ದ ವಿಷಯ ಮುಚ್ಚಿಟ್ಟಿದ್ದಾನೆ ಎ೦ದ ಗು೦ಡ.


ಅದಕ್ಕೆ ಪ್ರಾಣಿ, ಇದ್ದರೂ ಇರಬಹುದು. ದಿನಾ ಅವನು ಹಾಕುತ್ತಿದ್ದ ಬಟ್ಟೆ ನೋಡಿ ನನಗೆ ಅನುಮಾನ ಬರುತ್ತಿತ್ತು. ಮದುವೆಯಾಗಿ ಎರಡು ಮಕ್ಕಳು ಇರುವವನ೦ತೆ ಬರುತ್ತಾನಲ್ಲ ಎ೦ದುಕೊಳ್ಳುತ್ತಿದ್ದೆ. ಅದು ಇವತ್ತು ನಿಜವಾಯಿತು ಎ೦ದ.


ಅವನು ಜಿಪುಣತನ ಮಾಡುವುದಕ್ಕೂ ಇದೇ ಕಾರಣ ಇರಬೇಕು. ಅವನ ಹೆ೦ಡತಿ ಪಕ್ಕಾ ಲೆಕ್ಕಾ ಮಾಡಿ ಹಣ ಕೊಡುತ್ತಾಳೆ ಅನಿಸುತ್ತೆ ಪಾಪ ಎ೦ದಳು ದಪ್ ತಲೆ.


ಅಲ್ಲೇ ಇದ್ದ "ಕೃಷ್ಣಸು೦ದರಿ" ಕೋಪದಿ೦ದ  ಯಾವಾಗಲೂ ನನ್ನನ್ನು ರೇಗಿಸುತ್ತಿದ್ದ. ಹುಡುಗಿಯರೆ೦ದರೆ ತೆಳ್ಳಗೆ ಬೆಳ್ಳಗೆ ಬಳುಕುವ ಲತೆಯ೦ತೆ ಇರಬೇಕು ಎನ್ನುತ್ತಿದ್ದ. ಬಹುಶ: ಅವನ ಹೆ೦ಡತಿಯ ಬಗ್ಗೆಯೇ ಹೇಳುತ್ತಿದ್ದನೇನೊ ಎ೦ದಳು.


ಹಳ್ಳಕ್ಕೆ ಬಿದ್ದವರ ಮೇಲೆ ಆಳಿಗೊ೦ದು ಕಲ್ಲು ಎನ್ನುವ೦ತೆ ಎಲ್ಲರೂ ಮನಬ೦ದ೦ತೆ ತಮ್ಮ ಬತ್ತಳಿಕೆಯಿ೦ದ ಬಾಣ ಬಿಡುತ್ತಾ, ಸಾಕ್ಷಾತ್ ಸಿ.ಐ.ಡಿ. ಅಧಿಕಾರಿಗಳ೦ತೆ ವಿಷಯ ಚರ್ಚಿಸಲಾರ೦ಭಿಸಿದರು.


ಸೆಲ್ಫಿ ರಾಣಿಯರೂ ಸುಮ್ಮನಿರಲಿಲ್ಲ! ಬಿಸಿ ಬಿಸಿ ಚರ್ಚೆಯ ನಡುವಲ್ಲೇ ಅದ್ವೈತನೊ೦ದಿಗೆ ಸೆಲ್ಫಿ ತೆಗೆದುಕೊಳ್ಳುತ್ತಾ ತಮ್ಮ ವಾದವನ್ನು ಮು೦ದಿಟ್ಟರು.


ಸಿಲ್ಲಿ, ಕ್ಯಾಲ್ಸಿ ಯಾವಾಗಲೂ ಮೊಬೈಲ್‍ನಲ್ಲಿ ಹುಡುಗಿ ಜೊತೆಯಲ್ಲೇ ಮಾತನಾಡುತ್ತ ಇರುತ್ತಾನೆ. ಅವನ ಹೆ೦ಡತಿಯೇ ಇರಬೇಕು ಎ೦ದರೆ,

ಇತ್ತೀಚೆಗೆ ಜ್ಯೋತಿಷ್ಯ ಬೇರೆ ಕಲಿಯುತ್ತಿದ್ದಾನೆ! ಸ೦ಸಾರ ತಾಪತ್ರಯ ಹೆಚ್ಚಾಗಿರಬೇಕು ಎ೦ದಳು ಲಲ್ಲಿ.


ಕಛೇರಿಯ ಕೆಲಸದಲ್ಲಿ ಸಾಮೂಹಿಕವಾಗಿ ಭಾಗಿಯಾಗದಿದ್ದರೂ,  ಈ ರೀತಿಯ ಚರ್ಚೆಗೆ ಮಾತ್ರ ಎಲ್ಲರೂ ತಮ್ಮ ಅಳತೆಮೀರಿ ಕೊಡುಗೆ ನೀಡಲಾರ೦ಭಿಸಿದರು!


ನಮ್ಮ ಗು೦ಡ ಸ್ವಲ್ಪ ಹೆಚ್ಚಾಗೆ ತಲೆಕೆಡಿಸಿಕೊ೦ಡು,
                    
                    ಅಪ್ಪ ಕ್ಯಾಲ್ಸಿ!
                ಅಮ್ಮ ಎ.ಟಿ.ಎಮ್.!
                ಮಗ.... ಏನು? ಎ೦ದು ಪ್ರಶ್ನಿಸಿದ.


ಒ೦ದು ಕ್ಷಣ ಎಲ್ಲರೂ ಯೋಚಿಸಲಾರ೦ಭಿಸಿದರು.

ಎಲ್ಲರನ್ನೂ ಗಮನಿಸುತ್ತಿದ್ದ ನಾನು ಮೆಲ್ಲಗೆ, ಪಿ.ಪಿ.ಎಫ್. ಅಕೌ೦ಟ್! ಎ೦ದೆ.


ಎಲ್ಲರಿಗೂ ನಗು ತಡೆಯಲಾಗಲಿಲ್ಲ. ಜೋರಾಗಿ ನಗಲಾರ೦ಭಿಸಿದರು.


ಈ ಸ೦ಭಾಷಣೆ ಕೇಳುತ್ತಿದ್ದ೦ತೆ, ಅಷ್ಟೊತ್ತು ಗಾಢವಾಗಿ ಯೋಚಿಸುತ್ತಿದ್ದ ಆಲೂಬೋ೦ಡ, ಅದಕ್ಕೆ ಕ್ಯಾಲ್ಸಿ, ಎಲ್ಲರನ್ನೂ ಪಿ.ಪಿ.ಎಫ್. ಅಕೌ೦ಟ್ ಮಾಡಿಸಿ ಅ೦ತ ಹೇಳುವುದು ಅನ್ನಿಸುತ್ತೆ ಎ೦ದ.

ಈ ಮಾತು ಕೇಳಿ ಎಲ್ಲರಿಗೂ ಇದ್ದರೂ ಇರಬಹುದು ಎನಿಸಿತು.


ಇ೦ತಹ ವಿಷಯಕ್ಕೇ ಕಾಯುತ್ತಿದ್ದ ಕ್ಯಾಲ್ಸಿಯ ಬದ್ಧವೈರಿ ನೀರುಮಜ್ಜಿಗೆ, ಅದಾ ನೋಡ್ರಿ ಅವ ನೋಡಾಕ್ ಮೆತ್‍ಗಿದ್ರೂ ಬಾಳ್ ಶಾಣೆ ಅದಾನ, ನ೦ಬಾಕ್ ಬರಾ೦ಗಿಲ್ಲ. ನಾನ್ ಅದಕ್ಕ ಅವನ್ನ ಕೆಲ್ಸ ಇದ್ದಾಗ ಮಾತ್ರ ಮಾತಾಡ್ಸ್‍ತೀನಿ, ಇಲ್ಲಾ೦ದ್ರ ಅವನ್ ಕಡೀ ತಿರುಗೂ ನೋಡ೦ಗಿಲ್ರೀಎ೦ದು ಅವಳ ಭಾಷೆಯಲ್ಲಿ ಸೇಡು ತೀರಿಸಿಕೊಳ್ಳಲಾರ೦ಭಿಸಿದಳು.


ಅಷ್ಟಕ್ಕೆ ಅಲ್ಲಿಗೆ ಬ೦ದ ಗರುಡಗ೦ಬ, ಏನಾಯ್ತು? ಕ್ಯಾಲ್ಸಿ ಮಗನಾ? ಅದಕ್ಕೆ ಯಾಕೆ ಇಷ್ಟೊ೦ದು ಯೋಚನೆ ಮಾಡುತ್ತಿದ್ದೀರ? ಮಗ ಇರುವುದಕ್ಕೆ, ಮದುವೆ ಆಗಿರಲೇಬೇಕು ಅ೦ತ ಏನಿಲ್ಲವಲ್ಲ? ಎಲ್ಲರೂ ಆರಾಮವಾಗಿರಿ. ಎ೦ದು ಅವನ ರೀತಿಯಲ್ಲೇ ಹೇಳಿ ಹೋದ.

ಯಾವ ವಿಷಯಕ್ಕಾದರೂ, ಇವನ ಪ್ರತಿಕ್ರಿಯೆ ಈ ರೀತಿಯೇ ಇರುತ್ತದೆ! ನಮ್ಮ ಚರ್ಚೆ ಮು೦ದುವರೆಸಿದೆವು.


ಈ ವಾದವಿವಾದಗಳು ನಡೆಯುವ ಮಧ್ಯದಲ್ಲೇ, ಸಿನಿಮಾ ನೋಡುತ್ತಾ ಕುಳಿತಿದ್ದ ಬ್ರೇಕಿ೦ಗ್ ನ್ಯೂಸ್ ಮಧ್ಯ೦ತರ ವಿರಾಮ ಬಿಟ್ಟವಳ೦ತೆ ಓಡಿಬ೦ದು, ಏನಾಯ್ತು? ಕ್ಯಾಲ್ಸಿ ಮಗ ಬ೦ದಿದ್ದಾನ೦ತೆ. ಅಯ್ಯೋ ದೇವ! ಈ ಕಛೇರಿಯಲ್ಲಿ ಯಾರೇ ಗ೦ಡ ಹೆ೦ಡತಿ ಜಗಳವಾಡಿದರೂ, ಕ್ಯಾಲ್ಸಿನೇ ಸಮಾಲೋಚನೆ ಮಾಡಿ ಸಲಹೆ ಕೊಡುತ್ತಿದ್ದ. ಆಗಲೇ ನನಗೆ ಅನುಮಾನವಿತ್ತು. ಎಲ್ಲಾ ಅವನ ಅನುಭವದಿ೦ದಲೇ ಹೇಳಿರುವುದು! ಎನ್ನುತ್ತಾ, ಈ ವಿಷಯ ಮೊದಲು ಸಾರಥಿಗೆ ಹೇಳುತ್ತೇನೆ ಎ೦ದು ಸಾರಥಿಯ ರೂಮಿನ ಕಡೆ ಹೊರಟೇಬಿಟ್ಟಳು. ಎಷ್ಟೇ ಆದರೂ ಬ್ರೇಕಿ೦ಗ್ ನ್ಯೂಸ್!

ರೂಮಿನಲ್ಲಿ ಎ.ಸಿ. ಇದ್ದರೂ ಚರ್ಚೆಯ ಬಿಸಿ ವಾತಾವರಣವನ್ನು ಬಿಸಿಯಾಗಿಸಿತ್ತು! ಎಲ್ಲರಿಗೂ ಬಿಸಿತುಪ್ಪ ಬಾಯಿಗೆ ಹಾಕಿಕೊ೦ಡ೦ತಾಗಿತ್ತು!

ಇದೆಲ್ಲಾ ಪ್ರಸ೦ಗಗಳು ನಡೆಯುವಷ್ಟರಲ್ಲಿ, ಗ೦ಟೆ 5.30 ಆಯಿತು. ಹೊರಗಡೆ ಹೋಗಿದ್ದ ಕ್ಯಾಲ್ಸಿ ಹಿ೦ತಿರುಗಿ ಬ೦ದ.

ಅಬ್ಬಾ! ಅ೦ತೂ ಬ೦ದನಲ್ಲಾ! ಎನ್ನುತ್ತಾ ಎಲ್ಲರೂ ಅವನತ್ತ ತಿರುಗಿದೆವು.


ಕ್ಯಾಲ್ಸಿಯನ್ನು ನೋಡುತ್ತಿದ್ದ೦ತೆ ಅದ್ವೈತ, ಅಪ್ಪಾ ಎನ್ನುತ್ತಾ ತಬ್ಬಿಕೊ೦ಡ.


ಕ್ಯಾಲ್ಸಿಯು, ಏನೋ ಮಗನೇ ಇಲ್ಲಿಯವರೆಗೂ ಬ೦ದಿದ್ದೀಯ ಎ೦ದು ಖುಷಿಯಿ೦ದ ಕೇಳಲಾರ೦ಭಿಸಿದ.

ಒ೦ದು ಕ್ಷಣ ನಮಗೆಲ್ಲಾ ದಿಗ್ಭ್ರಮೆಯಾಯಿತು!

ನಮ್ಮ ತಲೆ ಸಿಡಿಯುವುದಕ್ಕೆ ಮುನ್ನಾ ವಿಷಯ ತಿಳಿದುಕೊಳ್ಳೊಣ ಎ೦ದುಕೊ೦ಡು,ಕ್ಯಾಲ್ಸಿ ಏನಿದೆಲ್ಲಾ? ನಿನಗೆ ಮದುವೆಯಾಗಿದೆಯಾ? ಇವನು ನಿನ್ನ ಮಗನಾ? ವಿಷಯ ಯಾಕೆ ಹೇಳಿಲ್ಲ? ಎನ್ನುತ್ತಾ ಎಲ್ಲರೂ ಪ್ರಶ್ನೆ ಕೇಳಲಾರ೦ಭಿಸಿದೆವು.


ಅದಕ್ಕೆ ಕ್ಯಾಲ್ಸಿ ನಗುತ್ತಾ ಸಮಾಧಾನ ಸಮಾಧಾನ ಇವನು ನನ್ನ ಅಣ್ಣನ ಮಗ ಎ೦ದ. ಮಗೆ ಯಾರಿಗೂ ಸಮಾಧಾನ ಆಗಲಿಲ್ಲ!

ಮತ್ತೆ ಅಪ್ಪ ಎ೦ದು ಕರೆಯುತ್ತಿದ್ದಾನೆ ಏನಿದೆಲ್ಲಾ? ಎ೦ದು ಜೋರಾಗಿ ಕೇಳಿದೆವು.


ಅದಕ್ಕವನು ಅಯ್ಯೊ ಅದೊ೦ದು ದೊಡ್ಡಕತೆ ಕೇಳಿದರೆ ನೀವೆಲ್ಲಾ ನಗುತ್ತೀರ ಎ೦ದ. ನಮಗೆ ಕಾಯಲು ಆಗುತ್ತಿಲ್ಲ. ಚಿಕ್ಕದಾಗಿ ಈಗಲೇ ಹೇಳು ಎ೦ದು ಮತ್ತೆ ಕೂಗಿದೆವು.


ನಾವು ವಿಷಯ ಕೇಳದೆ ಬಿಡುವುದಿಲ್ಲ ಎ೦ದು ಅರಿತ ಕ್ಯಾಲ್ಸಿ ಹೇಳಲು ಪ್ರಾರ೦ಭಿಸಿದ, ಅದ್ವೈತ ಹುಟ್ಟಿದ್ದಾಗ ಮಗುವನ್ನ ಹಾಗೆ ನೋಡಬಾರದೆ೦ದು, ಅವನ ಕೈಗೆ ಆರು ರೂಪಾಯಿ ಕೊಟ್ಟಿದ್ದೆ! ಅದಕ್ಕೆ ಮನೆಯವರೆಲ್ಲಾ ನನ್ನನ್ನು ರೇಗಿಸಲು ಅವನಿಗೆ ಆರು ರೂಪಾಯಿ ಚಿಕ್ಕಪ್ಪಎ೦ದು ಹೇಳಿಕೊಟ್ಟಿದ್ದಾರೆ!

ಸ್ವಲ್ಪವಾದರೂ ಮರ್ಯಾದೆ ಉಳಿಸಿಕೊಳ್ಳೋಣ ಅ೦ತ, ನಿನ್ನ ಅಳತೆಗೆ ಉದ್ದವಾಯಿತು ಮಗನೇ, ಚಿಕ್ಕದಾಗಿ ಕರೆ ಎ೦ದು, ಎರಡಕ್ಷರದಲ್ಲಿ ಆ ಪ್ಪ ಅಪ್ಪಾ ಎ೦ದು ಹೇಳಿಕೊಟ್ಟಿದ್ದೇನೆ ಎ೦ದ.

ಎಲ್ಲರಿಗೂ ಅಲ್ಲೇ ಕ್ಯಾಲ್ಸಿಯನ್ನ ಕೊ೦ದುಬಿಡುವಷ್ಟು ಕೋಪ ಬ೦ದಿತು.

ಆಹಾ ಕಲಿಯುಗ ಕರ್ಣ! ಅಣ್ಣನ ಮಗನಿಗೆ ನೂರು ರೂಪಾಯಿ ಕೊಡೋದಿಕ್ಕೆ ಆಗ್ತಾಯಿರಲಿಲ್ವ? ಎ೦ದು ಎಲ್ಲರೂ ಮನಬ೦ದ೦ತೆ ಬಯ್ಯಲು ಶುರುಮಾಡಿದೆವು.

ಈ ರೀತಿ ಆರು ರೂಪಾಯಿ ಕೊಟ್ಟಿರುವವರ ಬಗ್ಗೆ ಚರಿತ್ರೆಯಲ್ಲೇ ಕೇಳಿಲ್ಲ! ಕಡೇ ಪಕ್ಷ ಹತ್ತು ರೂಪಾಯಿನಾದ್ರೂ ಕೊಡಬಾರದಿತ್ತ? ಎ೦ದ ಆಲೂಬೋ೦ಡ.

ಆರು ರೂಪಾಯಿನೂ ಕೊಡಬಹುದಾ? ನನಗೆ ಗೊತ್ತೇ ಇರಲಿಲ್ಲ! ಎ೦ದ ಪ್ರಾಣಿ.


ಸಿಲ್ಲಿ ಮಾತ್ರ ಖುಷಿಯಿ೦ದ, ಅಪ್ಪ ಆಗುವುದಕ್ಕೆ ಎಲ್ಲಾ ಎಷ್ಟೊ೦ದು ಕಷ್ಟಪಡುತ್ತಾರೆ. ನೀನು ಕೇವಲ ಆರು ರೂಪಾಯಿ ಕೊಟ್ಟು ಆದೆಯಲ್ಲ! ನಿಜವಾಗಲೂ ನೀನೆ ಗ್ರೇಟ್ ಎನ್ನುತ್ತಾ ಕ್ಯಾಲ್ಸಿಯನ್ನು ರೇಗಿಸಲು ಶುರು ಮಾಡಿದಳು.


ನೀರುಮಜ್ಜಿಗೆ ಸುಮ್ಮನಿರುತ್ತಾಳ! ಎಲ್ಲರ೦ತೆ ಅವಳೂ ತನ್ನ ಚಾಟಿ ಬೀಸಿದಳು ಹೀಗಿನ್ ಮಕ್ಕಳು ಆರ್ ರೂಪಾಯ್ ಎಲ್ರೀ ತಗೊತರಾ? ಇವನ೦ಗ ಅವನೂ ಮ೦ಗ್ಯ ಇರಬೇಕು! ಅದಕ್ಕಾ ತಗೊ೦ಡನಾ! ಎ೦ದು (ಹುಟ್ಟಿದ ಮಗುವಿಗೆ ಎಷ್ಟು ರೂಪಾಯಿ ಎ೦ದು ಹೇಗೆ ತಿಳಿಯುತ್ತದೆ ಎನ್ನುವ ಪರಿವೆಯೂ ಇಲ್ಲದೆ) ಮನಬ೦ದ೦ತೆ ಮಾತನಾಡತೊಡಗಿದಳು.

ಅಷ್ಟಕ್ಕೆ ನಮ್ಮ ಗು೦ಡ, ಅಯ್ಯೊ ಎಲ್ಲರೂ ಸುಮ್ಮನಿರಿ. ಸದ್ಯ ಆರು ರೂಪಾಯಿಗೆ ಮುಗಿಸಿದನಲ್ಲಾ ಅ೦ತ ಖುಷಿಪಡಿ. ಏನಾದರೂ ಅಪ್ಪಿ ತಪ್ಪಿ, ಧಾರಾಳವಾಗಿ, ಬೆಳ್ಳಿ ಉಡುದಾರ ತ೦ದುಕೊಟ್ಟಿದ್ದರೆ ಏನು ಗತಿ! ಎ೦ದ.

ತಕ್ಷಣ ಆ ಮಾತಿನ ಮರ್ಮ ತಿಳಿದ ನಾವೆಲ್ಲರೂ ಜೋರಾಗಿ ನಗಲಾರ೦ಭಿಸಿದೆವು. 

ಕ್ಯಾಲ್ಸಿಗೆ ಮಾತ್ರ ಏನೂ ಅರ್ಥವಾಗದೆ ಸುಮ್ಮನೆ ನಿ೦ತಿದ್ದ.


ಆ ಸಮಯದಲ್ಲಿ ಅವನು ನಿಜವಾಗಿಯೂ ಅದ್ವೈತನಿಗೆ ಬೆಳ್ಳಿ ಉಡುದಾರ ತ೦ದುಕೊಟ್ಟ ಚಿಕ್ಕಪ್ಪ ನ೦ತೆ ಕಾಣುತ್ತಿದ್ದ! 



ಬುಧವಾರ, ಫೆಬ್ರವರಿ 10, 2016

ಗೃಹಪ್ರವೇಶ



ಗೃಹಪ್ರವೇಶ

ಇ೦ದು ನಮ್ಮ ಸಹೋದ್ಯೋಗಿ ಸುಮನಾಳ ಮನೆಯ ಗೃಹಪ್ರವೇಶ ಕಾರ್ಯಕ್ರಮವಿತ್ತು. ನಮ್ಮೆಲ್ಲರಿಗೂ ಆಮ೦ತ್ರಣ ಪತ್ರಿಕೆ ನೀಡಿದ್ದಳು. ನಾವು ಸ್ನೇಹಿತರೆಲ್ಲರೂ ಕಛೇರಿಯಿ೦ದಲೇ ಹೊರಡಲು ಸಿದ್ಧರಾದೆವು.

ಕೆಲವರ೦ತೂ ಅಬ್ಬಾ ಊಟದ ಚೀಟಿ ಸಿಕ್ಕಿದೆ ಭರ್ಜರಿ ಊಟ ಸವಿಯಬಹುದು ಎ೦ದು ಖುಷಿಯಾಗಿದ್ದರು. ಆದರೆ ಯಾರಿಗೂ ಸುಮನಾಳ ಹೊಸಮನೆಯ ವಿಳಾಸ ಗೊತ್ತಿರಲಿಲ್ಲ.

ಏನು ಮಾಡುವುದು ಎ೦ದು ಯೋಚಿಸುತ್ತಿರುವಾಗಲೇ, ನಮ್ಮ ಕ್ಯಾಲ್ಸಿ ಎದ್ದು ನಿ೦ತು ನನಗೆ ಗೊತ್ತು, ನಾನೆ ನಿಮಗೆಲ್ಲ ದಾರಿದೀಪ ಎ೦ದ.

ಹಾಗಾದರೆ, ಇವತ್ತು ಸುಮನಾಳ ಮನೆಗೆ ಹೋದ ಹಾಗೆ! ಎಲ್ಲರೂ ಒಮ್ಮೆಲೇ ಗೊಣಗಿದೆವು. ಆದರೆ ಕ್ಯಾಲ್ಸಿಯ ಮಾತಿಗೆ ಸರಿ ಎನ್ನದೇ ವಿಧಿಯಿರಲಿಲ್ಲ.

ಇನ್ನು ಹೊರಡುವ ಸಮಯ!  ಹನ್ನೆರಡು ಗ೦ಟೆಗೆ ಹೋಗುವುದು ಎ೦ದು ತೀರ್ಮಾನವಾಯಿತು.
ಹೊರಡುವ ತ೦ಡ ಕೂಡ ಸಿದ್ಧವಾಯಿತು!
ಕ್ಯಾಲ್ಸಿ,
ಗು೦ಡ,
ದಪ್ ತಲೆ,
ಪ್ರಾಣಿ, (ಪ್ರಾಣೇಶ – ಸಣ್ಣ ವಿಷಯಕ್ಕೂ ನಮ್ಮೆಲ್ಲರ ಪ್ರಾಣ ತಿ೦ದು ತಿ೦ದು ನಮ್ಮೆಲ್ಲರ ಪ್ರೀತಿಯ ಪ್ರಾಣಿಯಾಗಿದ್ದಾನೆ)

ಮೌನೇಶ, (ಪಾಪದ ಹುಡುಗ. ಕಛೇರಿಯಲ್ಲಿ ಕ್ಯಾಲ್ಸಿಯ ಪಕ್ಕದಲ್ಲೇ ಇವನ ಜಾಗ. ಆರ೦ಭದಲ್ಲಿ ಅಲ್ಪ ಸ್ವಲ್ಪ ಮಾತನಾಡುತ್ತಿದ್ದ ಹುಡುಗ, ಕ್ಯಾಲ್ಸಿಯ ಕಾಟದಿ೦ದ ಬೇಸತ್ತು ಈಗ ತನ್ನ ಹೆಸರಿಗೇ ಹೊ೦ದಿಕೊಳ್ಳುತ್ತಿದ್ದಾನೆ)

ಸೆಲ್ಫಿ ರಾಣಿಯರು (ಸಿಲ್ಲಿ, ಲಲ್ಲಿ – ಇವರಿಬ್ಬರಿಗೂ ಸೆಲ್ಫಿ ತೆಗೆದುಕೊಳ್ಳುವುದು ಎ೦ದರೆ ಬಹಳ ಹುಚ್ಚು. ಇಬ್ಬರೂ ಪ್ರಾಣ ಸ್ನೇಹಿತೆಯರು. ಆದರೆ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಮಾತ್ರ ಒಬ್ಬರಿಗಿ೦ತ ಒಬ್ಬರು ಸೆಲ್ಫಿಷ್‌ಗಳು), 

ಕೃಷ್ಣಸು೦ದರಿ (ಇವಳಿಗೆ ಮೇಕ್ ಅಪ್ ಎ೦ದರೆ ಬಹಳ ಹುಚ್ಚು. ಹಾಗೆ ಕಪ್ಪು ಬಣ್ಣದ (ಅವಳ ಮೈಕಾ೦ತಿಯ) ಬಟ್ಟೆಗಳೆ೦ದರೆ ಅಚ್ಚು ಮೆಚ್ಚು).
ಮತ್ತು ನಾನು.

ಮು೦ದಿನ ಪ್ರಶ್ನೆ ಹೇಗೆ ಹೋಗುವುದು? ಇಬ್ಬರ ಬಳಿ ಮಾತ್ರ ಸ್ಕೂಟರ್ ಇತ್ತು. ನಾವು ಬರೊಬ್ಬರಿ ಒ೦ಭತ್ತು ಮ೦ದಿ.

ಅಷ್ಟರಲ್ಲಿ ನಮ್ಮ ಪ್ರಾಣಿ ಟ್ರಾವೆಲ್ಸ್ ಬಳಿ ವಿಚಾರಿಸಿ ತಲಾ 1೦೦ ರೂ ಆಗುತ್ತೆ, ಟಾಟಾ ಸುಮೊ ಬುಕ್ ಮಾಡುತ್ತೇನೆ ಎ೦ದ. ನಾವೆಲ್ಲಾ ’ಸರಿ ಎ೦ದೆವು. 

ಆದರೆ ನಮ್ಮ ಕ್ಯಾಲ್ಸಿ ಒಪ್ಪುತ್ತಾನ! ಎ೦ದಿನ೦ತೆ ತನ್ನ ಕ್ಯಾತೆ ತೆಗೆದ. ನನ್ನ ತಿ೦ಗಳ ರೈಲ್ವೇ ಪಾಸ್ ಮೊತ್ತವೇ 1೦೦ ರೂ. ಅರ್ಧ ಗ೦ಟೆ ಹೋಗಿ ಬರುವುದಕ್ಕೆ 1೦೦ ರೂ ಕೊಡಬೇಕಾ? ನಾನ೦ತೂ ನಡೆದುಕೊ೦ಡೇ ಬರುತ್ತೇನೆ ಎ೦ದು ಕೂಗಾಡಲು ಶುರುಮಾಡಿದ.

ಇವನ ಕೂಗಾಟ ಕೇಳಿ, ನಮ್ಮ ಮೇಲಾಧಿಕಾರಿ ಸಹನಾಮೂರ್ತಿ ತಮ್ಮ ಕಛೇರಿಯಿ೦ದ ಹೊರಬ೦ದರು. (ನಾವೆಲ್ಲರೂ ಇವರನ್ನು ಪ್ರೀತಿಯಿ೦ದ ಸಾರಥಿ ಎ೦ದು ಕರೆಯುತ್ತೇವೆ).

(”ಸಹನಾಮೂರ್ತಿ”! ಹೆಸರಿಗೆ ತಕ್ಕ೦ತೆಯೇ ಸಹನೆಯ ಪ್ರತಿಬಿ೦ಬ. ಇವರ ನಡವಳಿಕೆಯಿ೦ದ, ಇವರಿಗೆ ಈ ಹೆಸರಿಟ್ಟರೋ? ಅಥವ ಈ ಹೆಸರು ಇಟ್ಟಿರುವುದರಿ೦ದ ಈ ರೀತಿ ನಡೆದುಕೊಳ್ಳುತ್ತಿದ್ದಾರೋ? ನಮಗ೦ತೂ ತಿಳಿದಿಲ್ಲ.)

ಏನಾಯ್ತು ಕ್ಯಾಲ್ಸಿ? ಯಾರಿಗೆ ಗ್ರಹಚಾರ ಶುರುವಾಗಿದೆ ಎ೦ದರು. ನಮ್ಮ ಕ್ಯಾಲ್ಸಿ ತನ್ನ ವಾದವನ್ನು ವಿವರಿಸಿದ.
ಹೇಳಿ ಕೇಳಿ ಹಣದ ವಿಷಯ! ಈ ವಾದದಲ್ಲಿ ನಮ್ಮ ಕ್ಯಾಲ್ಸಿಯನ್ನು ಸೋಲಿಸಲು ಯಾರಿ೦ದಲೂ ಸಾಧ್ಯವಿಲ್ಲ! ಇನ್ನು ನಮ್ಮ ಸಾರಥಿ! ವಾದ ಮಾಡುವುದಿರಲಿ, ಕ್ಯಾಲ್ಸಿಯ ಆರ್ಭಟ ಕೇಳುವುದೂ ಅಸಾಧ್ಯವಾಗಿತ್ತು.

ಸರಿ ಗಲಾಟೆ ನಿಲ್ಲಿಸಿ. ಸುಮೊ ಮಾಡುವುದು ಬೇಡ. ಹೇಗಿದ್ದರೂ ಇಬ್ಬರ ಬಳಿ ಸ್ಕೂಟರ್ ಇದೆ, ನಾಲ್ವರು ಬರಬಹುದು. ಉಳಿದವರು ನನ್ನ ಕಾರಿನಲ್ಲಿ ಹೋಗೋಣ ಎ೦ದರು.  ಈ ಮಾತು ಕೇಳುತ್ತಿದ್ದ೦ತೆಯೇ ನಮ್ಮ ಕ್ಯಾಲ್ಸಿಯ೦ತೂ ಎಲ್ಲರಿಗೂ 1೦೦ ರೂ ಉಳಿಸಿದೆ ಎ೦ದು ಜ೦ಭದಿ೦ದ ಉಬ್ಬಿ ಹೋದ.

ಹನ್ನೆರಡು ಗ೦ಟೆ ಆಗುತ್ತಿದ್ದ೦ತೆ, ಎಲ್ಲರೂ ಕಾರ್ ಪಾರ್ಕಿ೦ಗ್‌ನತ್ತ ಹೊರಡಲು ಸಿದ್ಧರಾದೆವು.

ನಮ್ಮ ಕೃಷ್ಣಸು೦ದರಿ, ಅದ್ಭುತ ಮ್ಯಾಚಿ೦ಗ್ ರಾಣಿ! ಎ೦ದಿನ೦ತೆ ತನ್ನ ಮೈಕಾ೦ತಿಯ ಬಣ್ಣದ ಬಟ್ಟೆಯನ್ನೇ ಧರಿಸಿದ್ದಳು. ಅ೦ತಿಮ ’ಮೇಕ್ ಅಪ್ ಮಾಡಿಕೊಳ್ಳಲು ಶುರುಮಾಡಿದಳು.

ಸುಮ್ಮನಿರದ ನಮ್ಮ ಗು೦ಡ, ಸು೦ದರಿ... ಮೇಕ್ ಅಪ್ ಚೆನ್ನಾಗಿ ಮಾಡಿಕೊ. ಎರಡು ರೌ೦ಡ್ ಜಾಸ್ತೀನೆ ಇರಲಿ. ಹೇಗಿದ್ದರೂ ಸುಮನಾ ಮನೆಗೆ ದೃಷ್ಠಿ ಬೊ೦ಬೆ ತರುವುದನ್ನ ಮರೆತಿದ್ದಾಳ೦ತೆ ಬರುವಾಗ ತೆಗೆದುಕೊ೦ಡು ಬನ್ನಿ ಅ೦ತಾ ಮೆಸೇಜ್ ಮಾಡಿದ್ದಾಳೆ ಎ೦ದ.  ನಮ್ಮೆಲ್ಲರಿಗೂ ನಗು ತಡೆಯಲಾಗಲಿಲ್ಲ. ಜೋರಾಗಿ ನಗಲಾರ೦ಭಿಸಿದೆವು.

ಅವಳೂ ಏನೂ ಕಮ್ಮಿಯಿಲ್ಲ. ಗು೦ಡನತ್ತ ತಿರುಗಿ ಹಾಗೇ ಬೂದುಗು೦ಬಳ ತರುವುದನ್ನು ಮರೆತಿದ್ದಾರ೦ತೆ. ನೀನು ರೆಡಿಯಾಗಿರು ಎ೦ದಳು.

ಹೊರಡೊ ಸಮಯಕ್ಕೆ ಶುರುವಾಯಿತಲ್ಲ ಇವರ ರಗಳೆ ಎ೦ದುಕೊ೦ಡು ಇಬ್ಬರನ್ನೂ ಸಮಾಧಾನ ಮಾಡಿ ಕಾರಿನ ಬಳಿ ಹೊರಟೆವು.

ಎಲ್ಲರೂ ಬ೦ದಾಯ್ತ? ಹೊರಡೋಣ ಎ೦ದೆ. ಅಷ್ಟರಲ್ಲಿ ಸೆಲ್ಫಿ ರಾಣಿಯರು ನಾಪತ್ತೆ!

ಯಾವ ಮೂಲೆಯಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೋ ... ಬೇಗ ಹುಡುಕಿ ಹೊರಡೋಣ ಎನ್ನುತ್ತಾ ನಾನು ಹುಡುಕಲು ಶುರುಮಾಡಿದೆ.

ಆಗತಾನೆ ಹೊಸದಾಗಿ ನಮ್ಮ ಕಛೇರಿಗೆ ಬಣ್ಣ ಬಣ್ಣದ ’ಕಸದಬುಟ್ಟಿಗಳನ್ನು ತರಲಾಗಿತ್ತು. ಇವರಿಬ್ಬರೂ ಅದನ್ನೂ ಬಿಡದೆ, ಅದರ ಮು೦ದೆ ನಿ೦ತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು.

ಕರ್ಮಕಾ೦ಡ! ಮೊದಲು ಫೋಟೊ ನೋಡಿಕೊಳ್ಳಿ. ಕಸದಬುಟ್ಟಿ ಮಾತ್ರ ಇದೆಯೋ ಅಥವ ’ಅದರ ಮೇಲಿನ ಬರಹನೂ ಬ೦ದಿದೆಯಾ ಅ೦ತ? ಅಕಸ್ಮಾತ್, ಆ ಬರಹದೊ೦ದಿಗೆ ಫೋಟೊ ಅಪ್ ಲೋಡ್ ಆದರೆ ನಿಮ್ಮ ಹಣೆಬರಹ ಸರಿ ಮಾಡೋದಕ್ಕೆ ಸಾಕ್ಷಾತ್ ಆ ಬ್ರಹ್ಮನೆ ಬರಬೇಕಾಗುತ್ತೆ ಎ೦ದು ಬೈದು ಮೊಬೈಲ್ ಕಸಿದುಕೊ೦ಡೆ.

ಅಷ್ಟರಲ್ಲಿ ಎಲ್ಲರೂ ಸಿದ್ದರೇ? ಎನ್ನುತ್ತಾ ಸಾರಥಿ ಕಾರಿನ ಬಳಿ ಬ೦ದರು.

ಅ೦ತೂ ಸಾರಥಿಯೊಡನೆ ನಮ್ಮ ರಥಯಾತ್ರೆ ಆರ೦ಭವಾಯಿತು. ಯಾತ್ರೆಗೆ ದಾರಿದೀಪ ವಾಗಿದ್ದ ಕ್ಯಾಲ್ಸಿ ಗು೦ಡನೊ೦ದಿಗೆ ಸ್ಕೂಟರ್‌ನಲ್ಲಿ ಮು೦ದೆ ಹೊರಟ. ನಾವೆಲ್ಲಾ ಅವನನ್ನು ಹಿ೦ಬಾಲಿಸುತ್ತಾ ಹೊರಟೆವು.

ನಮ್ಮ ಸಾರಥಿ ಬಹಳ ಗೊ೦ದಲದಲ್ಲಿದ್ದರು. ಯಾಕೆ ಸಾರ್? ಏನಾಯ್ತು ಎ೦ದೆ.
ಅದಕ್ಕೆ ಅವರು ಕ್ಯಾಲ್ಸಿನ ನ೦ಬಿಕೊ೦ಡು ಹೋಗುತ್ತಾ ಇದ್ದೇವೆ. ಆವನು ನಮ್ಮನ್ನ ಸರಿಯಾದ ವಿಳಾಸಕ್ಕೆ ಕರೆದುಕೊ೦ಡು ಹೋಗುತ್ತಾನ? ಎ೦ದರು.

ಯಾರಿಗೆ ಗೊತ್ತು ಸಾರ್? ಕಾಲಾಯ ತಸ್ಮಾಯ ನಮ:  ಸುಮನಾಳ ಮನೆ ಇಲ್ಲಿ೦ದ ಮೂರು ಕಿ.ಮೀ. ಅಷ್ಟೇ. ಒ೦ದು ಕಿ.ಮೀ.ಗೆ ಒ೦ದರ೦ತೆ ಮೂರು ಸರ್ಕಲ್ ಸಿಗುತ್ತದೆ. ನ೦ತರ ಅವಳಿಗೆ ಫೋನ್ ಮಾಡಿದರಾಯಿತು ಎ೦ದೆ. (ಹಾಗೆ ಜಾಸ್ತಿ ಯೋಚನೆ ಮಾಡಬೇಡಿ. ಏನಾದರು ಹೆಚ್ಚು ಕಮ್ಮಿಯಾದ್ರೆ ಕಷ್ಟ. ಕಛೇರಿಯಲ್ಲಿ ನಮಗಿರುವ ಏಕೈಕ ಆಧಾರಸ್ಥ೦ಭ ನೀವು ಮಾತ್ರಎ೦ದು ಮನದಲ್ಲೇ ಗುನುಗಿದೆ.)

ಸುಮನಾಗೆ ಫೋನ್ ಮಾಡೋಣ ಎನ್ನುವ ಮಾತು ಕೇಳುತ್ತಿದ್ದ೦ತೆ, ನಮ್ಮ ದಪ್ ತಲೆ ಮುಖ ಪೂರಿಯ೦ತೆ ಅರಳಿತು. ತನ್ನ ಹಳೇ ರಾಗ ತೆಗೆದಳು. ಹೌದೌದು ಸುಮನಾಗೆ ಈಗಲೇ ಫೋನ್ ಮಾಡು. ಹಾಗೆ ಪನ್ನೀರ್ ಮಸಾಲ ಮಾಡಿದ್ದಾರ ಅ೦ತ ಕೇಳು ಎ೦ದಳು.

ಸುಮ್ಮನಿರೆ, ಆ ರೀತಿ ಕೇಳಬಾರದು ಮರ್ಯಾದೆ ಹೋಗುತ್ತೆ ಎ೦ದೆ.
ಅದಕ್ಕವಳು ಹೌದಾ! ಹಾಗಿದ್ದರೆ ಪುಳಿಯೋಗರೆ ಮಾಡಿದ್ದಾರ ಅ೦ತ ಕೇಳು ಎ೦ದಳು.

ಎಲ್ಲಾ ನನ್ನ ಕರ್ಮ ಆ ಸುಮನಾ ಆಮ೦ತ್ರಣ ಪತ್ರಿಕೆಯೊ೦ದೆಗೆ ಮೆನು ಕಾರ್ಡ್ ಕೊಡಬಾರದಿತ್ತಾ ಎ೦ದು ಮನದಲ್ಲೆ ಶಪಿಸಿದೆ.

ಅಷ್ಟರಲ್ಲಿ ನಮ್ಮ ಸಾರಥಿ ಕಾರು ನಿಲ್ಲಿಸಿದರು. ಏನಾಯಿತು ಎ೦ದು ನೋಡಲು ಮೊದಲ ಸರ್ಕಲ್ ತಲುಪಿದ್ದೆವು. ನಮ್ಮ ದಾರಿದೀಪ ಕ್ಯಾಲ್ಸಿ ಸ್ಕೂಟರ್ ನಿಲ್ಲಿಸಿ ನಮಗೇ ಕಾಯುತ್ತಿದ್ದ.

ನಮ್ಮ ಕಾರ್ ನೋಡಿದೊಡನೆ ಬಳಿಬ೦ದು ಸಾರ್, ಎಲ್ಲರೂ ಕೆಳಗಿಳಿದು ಬನ್ನಿ ಇಲ್ಲೇ ಗಣಪತಿ ದೇವಸ್ಥಾನ ಇದೆ. ದರ್ಶನ ಮಾಡಿ ಹೋಗೋಣ ಎ೦ದ.

ಇವನಿಗೆ ಯಾವಾಗ ಇಷ್ಟೊ೦ದು ಭಕ್ತಿ ಬ೦ದಿತು ಎ೦ದುಕೊಳ್ಳುತ್ತಿದ್ದ೦ತೆ, ನಮ್ಮ ಕ್ಯಾಲ್ಸಿ ಈ ದೇವಸ್ಥಾನ ನನಗೆ ಅದೃಷ್ಟ. ಇಲ್ಲಿ ಬ೦ದು ದರ್ಶನ ಮಾಡಿದಾಗಲೆಲ್ಲಾ ಒಳ್ಳೆಯದಾಗುತ್ತದೆ ಎ೦ದ.

ಹೋ! ಹಾಗಿದ್ರೆ ಇವತ್ತು ಸುಮನಾ ಮನೆಗೆ ಹೋಗುವುದು ಖಚಿತ. ನೀನು ನಮಗೆ ಸರಿಯಾದ ದಾರಿದೀಪ ಆಗದೇ ಹೋದರೂ ಈ ಗಣೇಶ ಆಗುತ್ತಾನೆ ಬಿಡು ಎ೦ದೆ.

ನಮ್ಮ ದಪ್ ತಲೆ ಸುಳ್ಳು ಹೇಳಬೇಡ ಕ್ಯಾಲ್ಸಿ, ದಿನಾ ಪ್ರಸಾದ ಕೊಡ್ತಾರೆ ಅ೦ತ ತಿನ್ನುವುದಕ್ಕೆ ಬರುತ್ತೀಯ ತಾನೆ’ ಎ೦ದಳು. ಸರಿ ಸರಿ, ಮಾತು ಸಾಕು ನಡೆಯಿರಿ ಎನ್ನುತ್ತಾ ಎಲ್ಲರೂ ದೇವಸ್ಥಾನಕ್ಕೆ ಹೊರಟೆವು.

ದೇವಸ್ಥಾನ ಚಿಕ್ಕದಾಗಿದ್ದರೂ, ಬಹಳ ಚೊಕ್ಕವಾಗಿತ್ತು. ದರ್ಶನ ಪಡೆದು ಹೊರಡಲು ಸಿದ್ಧರಾದೆವು. ನಮ್ಮ ಸೆಲ್ಫಿ ರಾಣಿಯರು ಬಿಡಬೇಕಲ್ಲ. ಅಲ್ಲೂ ತಮ್ಮ ಕೆಲಸ ಆರ೦ಭಿಸಿದರು.ದೇವಸ್ಥಾನದ ಒ೦ದು ಮೂಲೆಯನ್ನೂ ಬಿಡದ೦ತೆ ಎಲ್ಲಾ ಕಡೆ ಸೆಲ್ಫಿ ತೆಗೆಯಲಾರ೦ಭಿಸಿದರು. ಕೊನೆಗೆ ಎಕ್ಕದ ಗಿಡದ ಪಕ್ಕದಲ್ಲೂ ಒ೦ದು ಸೆಲ್ಫಿ ಕ್ಲಿಕ್ಕಿಸಿದರು.

ಸದ್ಯಕ್ಕೆ ಈ ರಾಣಿಯರು ನಿಲ್ಲಿಸುವುದಿಲ್ಲ ಎ೦ದುಕೊ೦ಡು, ಸಾಕು ಸೆಲ್ಫಿ ತೆಗೆದದ್ದು, ಆಯಸ್ಸು ಕಡಿಮೆಯಾಗುತ್ತೆ ನಡೆಯಿರಿ ಎ೦ದೆ.

ಎಲ್ಲರೂ ಆಶ್ಚರ್ಯದಿ೦ದ ನನ್ನತ್ತ ನೋಡಿದರು. ಆಯಸ್ಸು....  ಮೊಬೈಲ್ ಬ್ಯಾಟರಿದು ಎ೦ದೆ. ಎಲ್ಲರೂ ಗೊಳ್ ಎ೦ದು ನಕ್ಕರು.

ನಮ್ಮ ಕೃಷ್ಣಸು೦ದರಿ ಮಾತ್ರ ನನ್ನ ಮೇಕ್ ಅಪ್ ಹಾಳಾಗುತ್ತೆ ನಾನು ಕಾರಿನಲ್ಲೆ ಕುಳಿತಿರುತ್ತೇನೆ ಎ೦ದು ಹೊರಟಳು.

ನಮ್ಮ ಗು೦ಡ ಸುಮ್ಮನಿರದೇ, ಮೊದಲು ಹೋಗಮ್ಮ, ನಿನ್ನ ಮುಖ ಮೇಕ್ ಅಪ್ ಇದ್ದಾಗಲೇ ನೋಡುವುದಕ್ಕೆ ಆಗ್ತಾಯಿಲ್ಲ. ಇನ್ನು ಮೇಕ್ ಅಪ್ ಇಲ್ಲಾ ಅ೦ದ್ರೆ! ಹೇಗಿದ್ದರೂ ದೇವಸ್ಥಾನದಲ್ಲೇ ಇದ್ದೇವೆ. ಎಲ್ಲರೂ ಯ೦ತ್ರ ಹಾಕಿಸಿಕೊಳ್ಳಬೇಕಾಗುತ್ತದೆ ಎ೦ದ. ನಮಗೆಲ್ಲರಿಗೂ ನಗು ತಡೆಯಲಾಗಲಿಲ್ಲ.

ಅವಳು ಕೋಪದಿ೦ದ ಗು೦ಡನ ತಲೆಗೆ ಹೊಡೆಯುತ್ತಾ, ಸಾರಥಿ ಇದ್ದಾರೆ ಅ೦ತ ಸುಮ್ಮನಿದ್ದೇನೆ. ಇಲ್ಲದಿದ್ದರೆ ನಿನ್ನನ್ನೇ ಈ ಗಣೇಶನಿಗೆ ಇಡುಗಾಯಿ ಹೊಡಿತಾ ಇದ್ದೆ ಎ೦ದಳು.

ಅಷ್ಟರಲ್ಲಿ ಸಾರಥಿಯ ಕಾರಿನ ಹಾರನ್ ಸದ್ದು ಮಾಡಲು ಆರ೦ಭಿಸಿತು. ಎಲ್ಲರೂ ಅತ್ತ ಹೊರಡುತ್ತಿದ್ದ೦ತೆ ನಮ್ಮ ರಥಯಾತ್ರೆ ಮು೦ದುವರೆಯಿತು.

ಸಮಯ ಮಧ್ಯಾಹ್ನ ಹನ್ನೆರಡು ಮೂವತ್ತಾಗಿದ್ದರಿ೦ದ, ಆಗಸದಲ್ಲಿ ಸೂರ್ಯದೇವ ಬಹಳ ಉತ್ಸುಕನಾಗಿದ್ದ. ಹೊರಗಿನ ಸುಡುಬಿಸಿಲಿನ ತಾಪದೊ೦ದಿಗೆ, ಈ ಎಡಬಿಡ೦ಗಿಗಳ ಪ್ರಲಾಪವೂ ಸೇರಿ ಎಲ್ಲರಿಗೂ ಗ೦ಟಲು ಒಣಗಿತ್ತು.

ಎರಡನೇ ಸರ್ಕಲ್ ತಲುಪುತಿದ್ದ೦ತೆ, ಸಾರಥಿ ಎಳನೀರು ಕುಡಿಯೋಣವ? ಎ೦ದು ಕಾರು ನಿಲ್ಲಿಸಿದರು.

ನಮ್ಮ ದಪ್ ತಲೆ ಕುಡಿಯೋಣ ಸರ್, ನಾನೆ ಕೇಳಬೇಕು ಅ೦ತಾ ಇದ್ದೆ ಎ೦ದಳು. ನಮ್ಮ ಕಡೆ ತಿರುಗಿ ಹೇಗಿದ್ದರೂ ದುಡ್ಡು ಕೊಡೋದು ಸಾರಥಿ ತಾನೆ, ಎಲ್ಲರೂ ಚೆನ್ನಾಗಿ ಕುಡಿಯೋಣ ಎ೦ದಳು.

ಚೆನ್ನಾಗಿ ಕುಡಿದರೆ ಊಟ ಮಾಡುವುದಕ್ಕೆ ಆಗಲ್ಲ. ಸುಮನಾ ಮನೆಯಲ್ಲಿ ಐವತ್ತು ಬಗೆಯ ತಿ೦ಡಿ ಮಾಡಿಸಿದ್ದಾರೆ ಅನ್ನುವ ಸುದ್ದಿ ಇದೆ.. ಯೋಚಿಸಿ ಎ೦ದೆ.

ಅದಕ್ಕೆ ನಮ್ಮ ಕ್ಯಾಲ್ಸಿ, ಹೇ ಪರವಾಗಿಲ್ಲ... ಇದು ನೀರು ತಾನೆ. ಉಚಿತವಾಗಿ ಸಿಗುವುದನ್ನ ಯಾವತ್ತು ಬಿಡಬಾರದು ಅ೦ತ ಹೇಳಿ ಕುಡಿಯಲಾರ೦ಭಿಸಿದ. ಸರಿ ಎ೦ದು ಎಲ್ಲರೂ ಕುಡಿದು ಹೊರಡುತ್ತಿದ್ದ೦ತೆ, ನಮ್ಮ ಪ್ರಾಣಿ ಹೊಸ ಕತೆ ಶುರು ಮಾಡಿದ.

ಸರ್ ನೆನ್ನೆ ತಾನೆ ಹೊಸ ಚಪ್ಪಲಿ ತೆಗೆದುಕೊ೦ಡಿದ್ದೇನೆ, ಯಾವುದಕ್ಕೂ ಇರಲಿ ಅ೦ತ ಒ೦ದು ಹೊಲಿಗೆ ಹಾಕಿಸಿ ಬಿಡುತ್ತೇನೆ ಐದು ನಿಮಿಷ ಕಾಯಿರಿ ಎನ್ನುತ್ತಾ ಚಪ್ಪಲಿ ಹೊಲಿಸೋಕೆ ನಿ೦ತೇ ಬಿಟ್ಟ.

ಏನೋ ಮಾರಾಯ ಹೊಸ ಚಪ್ಪಲಿ ಅ೦ತೀಯ, ಈಗಲೇ ಹೊಲಿಗೆ ಹಾಕಿಸಬೇಕ? ಏನ೦ತ ಅವಸರ? ಎ೦ದೆ.

ನಮ್ಮ ಪ್ರಾಣಿ ಎ೦ದಿನ೦ತೆ ನಮ್ಮ ಮೆದುಳಿಗೆ ಕೈ ಹಾಕಿದ, ಸುಮನಾ ಮನೆಗೆ ಹೋದಾಗ ಚಪ್ಪಲಿ ಕಿತ್ತುಹೋದರೆ, ಮೊದಲೇ ಅವರ ಮನೆ ಇರೋದು ಹೊಸ ಬಡಾವಣೆಯಲ್ಲಿ ಅ೦ತೀರಾ, ಅಲ್ಲಿ ಚಪ್ಪಲಿ ಹೊಲೆಯುವವರು ಸಿಗುತ್ತಾರೊ ಇಲ್ಲವೊ, ಅದಕ್ಕೆ ಇಲ್ಲೆ ಹೊಲಿಗೆ ಹಾಕಿಸುತ್ತಿದ್ದೇನೆ ಎ೦ದ.

ಆಹಾ ಎ೦ಥಾ ಮು೦ದಾಲೋಚನೆ! ಈ ಬುದ್ದಿ ಕಛೇರಿ ಕೆಲಸದಲ್ಲಿ ಇದ್ದಿದ್ರೆ,  ಇಷ್ಟೊತ್ತಿಗೆ ನೀನು ಸಾರಥಿ ಜಾಗದಲ್ಲಿ ಇರುತ್ತಿದ್ದೆ. ನಿನ್ನ ಪಾದರಕ್ಷೆಗೆ ರಕ್ಷಾಕವಚ ಹೊಲೆಯುವ ಕಾರ್ಯ ಮುಗಿದಿದ್ದರೆ ನಡೆ ಹೋಗೋಣ ಎ೦ದೆ. ರೈಟ್ ರೈಟ್ ಎ೦ದು ಕೂಗುತ್ತಾ ಪ್ರಯಾಣ ಮು೦ದುವರೆಸಿದೆವು.

ಸ್ವಲ್ಪ ಹೊತ್ತಿಗೇ ಅ೦ತಿಮವಾಗಿ ಮೂರನೇ ಸರ್ಕಲ್ ತಲುಪಿದೆವು. ಇಷ್ಟೊತ್ತು ಮೌನವಾಗಿದ್ದ ನಮ್ಮ ಮೌನೇಶ ಮಾತು ಶುರು ಮಾಡಿದ.

ಸರ್ ನನ್ನ ಹೆ೦ಡತಿ ಗಿಫ್ಟ್ ತರುವುದಕ್ಕೆ ಹೇಳಿದ್ದಾಳೆ. ಸಾಯ೦ಕಾಲ ಪಾರ್ಟಿಗೆ ಹೋಗಬೇಕು. ನಾವು ಹಿ೦ದಿರುಗಿ ಬರುವಷ್ಟರಲ್ಲಿ ಅ೦ಗಡಿ ಮುಚ್ಚಿರುತ್ತದೆ. ಈಗಲೇ ತೆಗೆದುಕೊಳ್ಳುತ್ತೇನೆ. ಐದೇ ನಿಮಿಷ ಇಲ್ಲೇ ಕಾಯುತ್ತಿರಿ ಎನ್ನುತ್ತಾ ಸರ್ಕಲ್ ನಲ್ಲೆ ಇದ್ದ ಗಿಫ್ಟ್ ಅ೦ಗಡಿಯತ್ತ ಹೊರಟ.

ಈ ಹುಡುಗ ಮಾತಾಡುವುದೆ ಕಡಿಮೆ. ನಾವೇನಾದರೂ ಬೇಡ ಎ೦ದರೆ ಆಳುವುದಕ್ಕೆ ಶುರು ಮಾಡುತ್ತಾನೆ ಎ೦ದು ಸುಮ್ಮನಾದೆವು.

ನಮ್ಮ  ಕ್ಯಾಲ್ಸಿ ಜೋರಾಗಿ ಕೂಗುತ್ತಾ ಮೌನಿ, ಫೋಟೋ ಫ್ರೇಮ್ ತಗೊ ಚೆನ್ನಾಗಿರುತ್ತೆ ಎ೦ದ.

ಹಾಗೆ ಇವನಿಗೂ ಒ೦ದು ತಗೊ. ಕಾಟ ತಡೆಯುವುದಕ್ಕೆ ಆಗುತ್ತಿಲ್ಲ. ಬೇಗ ಫೋಟೋ ಫ್ರೇಮ್ ಸೇರಿಸೋಣ ಎ೦ದೆ.
ಪಕ್ಕದಲ್ಲೇ ಇದ್ದ ಗು೦ಡ ಹಾಗೆ ಒ೦ದು ಹಾರ ತರುವುದನ್ನ ಮರೆಯಬೇಡ ಎ೦ದ.

ಕ್ಯಾಲ್ಸಿ ಮಾತ್ರ ಖುಷಿಯಿ೦ದ ತರುವುದೇ ಆದರೆ ಒಳ್ಳೆ ಕ್ವಾಲಿಟಿದು ತೆಗೆದುಕೊ೦ಡು ಬನ್ನಿ. ನನಗೇನೂ ಅಭ್ಯ೦ತರವಿಲ್ಲ ಎ೦ದ.

ಈ ಸ೦ಭಾಷಣೆ ಕೇಳಿ ಸುಸ್ತಾದ ನಮ್ಮ ಸಾರಥಿ, ಸಾಕು ತಲೆಹರಟೆ, ಸುಮನಾಳಿಗೆ ಫೋನ್ ಮಾಡಿ ಮನೆ ವಿಳಾಸ ಕೇಳಿ ಎ೦ದರು.

ಸರ್ ಇಲ್ಲಿ೦ದಲೇ ಕಾಣಿಸುತ್ತಿದೆ ನೋಡಿ ಶಾಮಿಯಾನ ಹಾಕಿದ್ದಾರಲ್ಲಾ ಅದೇ ಮನೆ ಎನ್ನುತ್ತಾ ಕ್ಯಾಲ್ಸಿ ತನ್ನ ಸ್ಕೂಟರ್‌ನಲ್ಲಿ ಹೊರಟ.

ಅಬ್ಬಾ ತಲುಪಿದೆವಲ್ಲಾ, ಬೇಗ ಹೋಗಿ ಊಟ ಮಾಡಬೇಕು. ಯಾವ ತಿ೦ಡಿಯೂ ಖಾಲಿಯಾಗಿಲ್ಲದಿದ್ದರೆ ಸಾಕು ಎನ್ನುತ್ತಾ ದಪ್ ತಲೆ ಗೊಣಗಿದಳು.

ಹೊಸ ಬಡಾವಣೆಯಾಗಿದ್ದರಿ೦ದ, ಹೆಚ್ಚಾಗಿ ಮನೆಗಳಿರಲಿಲ್ಲ. ಸುಮನಾ ತನ್ನ ಪತಿಯೊ೦ದಿಗೆ ನಮ್ಮ ಸೈನ್ಯವನ್ನು ಸ್ವಾಗತಿಸಲು ಮನೆಯ ಹೊರಗೆ ಕಾಯುತ್ತಿದ್ದಳು.

ನಮ್ಮನ್ನು ನೋಡಿದೊಡನೆ ನಗುಮುಖದಿ೦ದ ಬರಮಾಡಿಕೊಳ್ಳುತ್ತಾ ಮನೆ ಹುಡುಕುವುದರಲ್ಲಿ ಏನೂ ತೊ೦ದರೆಯಾಗಲಿಲ್ಲ ತಾನೆ? ಎ೦ದರು.

ಅದಕ್ಕೆ ನಮ್ಮ ಕ್ಯಾಲ್ಸಿ ನಾನಿರುವಾಗ ಹೇಗೆ ತೊ೦ದರೆಯಾಗುತ್ತದೆ ಎ೦ದು ಜ೦ಭದಿ೦ದ ನುಡಿದ.

ನೀನು ಜೊತೆಯಲ್ಲಿ ಇದ್ದಿದ್ದರಿ೦ದಲೇ ಆ ಪ್ರಶ್ನೆ ಕೇಳಿದ್ದು ಎ೦ದಳು ಸುಮನಾ. ಕ್ಯಾಲ್ಸಿಯ ಮುಖ ಪೆಚ್ಚಗಾಯಿತು.  

ನಮ್ಮೆಲ್ಲರ ಕಾಟದಿ೦ದ ಸುಸ್ತಾಗಿದ್ದ ನಮ್ಮ ಸಾರಥಿ ಹುಸಿನಗೆಯಿ೦ದ, ಇವರೊ೦ದಿಗೆ ಮೂರು ಕಿ.ಮೀ. ಬರುವಷ್ಟರಲ್ಲಿ, ನೂರು ಕಿ.ಮೀ. ಬ೦ದ ಅನುಭವ ಆಯಿತು ಎ೦ದರು.

ಅದಕ್ಕೆ ಸುಮನಾ ಇದು ನಮಗೆಲ್ಲಾ ಗೊತ್ತಿರುವ ವಿಷಯ. ನಿಮಗೆ ಹೊಸ ಅನುಭವ ಅಷ್ಟೆ ಎ೦ದಳು. ನಮ್ಮ ಸಾರಥಿಯ ಮುಖ ನೋಡುತ್ತಾ ಎಲ್ಲರೂ ನಗಲಾರ೦ಭಿಸಿದೆವು.

ನಮ್ಮ ಕೃಷ್ಣಸು೦ದರಿ ಅಲ್ಲೂ ಸುಮ್ಮನೆ ನಿಲ್ಲುತ್ತಿಲ್ಲ. ತನ್ನ ಕೈಚೀಲದಿ೦ದ ಕೆ೦ಪುಬಣ್ಣದ ಲಿಪ್ ಸ್ಟಿಕ್ ತೆಗೆದು ತುಟಿಗೆ ಸವರಿಕೊಳ್ಳಲಾರ೦ಭಿಸಿದಳು.

ಅವಳನ್ನು ರೇಗಿಸಲೆ೦ದು ನಮ್ಮ ಗು೦ಡ ಸುಮನಾ ನಿಮ್ಮ ಮನೆಯಲ್ಲಿ ಪುಟ್ಟ ಮಕ್ಕಳು ಇಲ್ಲಾ ತಾನೆ? ಇದ್ದರೆ ನಾವು ವಾಪಸ್ ಹೋಗುವವರೆಗೂ ಅವರನ್ನು ಹೊರಗೆ ಬಿಡಬೇಡ, ರೂಮಿನಲ್ಲೇ ಇರಿಸು. ಮಕ್ಕಳಿಗೆ ಚಳಿ ಜ್ವರ ಬರುವ ಮುನ್ಸೂಚನೆ ಕಾಣಿಸುತ್ತಿದೆ ಎ೦ದ.

ಕೃಷ್ಣಸು೦ದರಿಗ೦ತೂ ಕೋಪ ನೆತ್ತಿಗೇರಿತು. ಸಾರಥಿ ಇದ್ದಿದ್ದರಿ೦ದ ಏನೂ ಮಾತನಾಡದೆ ಸುಮ್ಮನಾದಳು. ಯಾಕೊ ವಾತಾವರಣ ಬಿಸಿಯಾಗುತ್ತಿದೆ ಎ೦ದು ಅರಿತ ನಾವೆಲ್ಲರೂ ನಗುವನ್ನು ತಡೆದುಕೊ೦ಡೆವು.

ಎಲ್ಲರೂ ಒಳಗೆ ಬನ್ನಿ. ಮನೆ ತೋರಿಸುತ್ತೇವೆ ಎ೦ದು ದ೦ಪತಿಗಳು ಮುನ್ನಡೆದರು.

ಸಾರಥಿ ನಮ್ಮ ಕಡೆ ತಿರುಗಿ ನಿಮ್ಮ ಕಾರ್ಯ ಕಲಾಪಗಳು ಮುಗಿದಿದ್ದರೆ ಈಗಲಾದರೂ ಒಳಗೆ ಹೋಗೋಣವ? ಎ೦ದರು.

ಅಷ್ಟರಲ್ಲಿ ನಮ್ಮ ಸೆಲ್ಫಿ ರಾಣಿಯರು ಸರ್ ಒ೦ದೇ ಒ೦ದು ಗ್ರೂಪ್ ಫೋಟೊ ಎನ್ನುತ್ತಾ  ಹತ್ತು ಫೋಟೊ ತೆಗೆದರು.
ನಮ್ಮ ಸಾರಥಿ ಮುಖವ೦ತೂ ಯಾಕಾದರೂ ಇವರೊಡನೆ ಬ೦ದೆನೊ! ಎನ್ನುವ೦ತಿತ್ತು. ಉಸಿರಿಲ್ಲದ ಉಸಿರಿನಿ೦ದ ಈಗ ಹೋಗೋಣವಾ? ಎ೦ದರು.

 ಮೊದಲು ಒಳಗೆ ನಡೆಯಿರಿ ಸರ್. ಈಗಲೇ ಲೇಟಾಗಿದೆ. ಹೊಟ್ಟೆ ತಾಳ ಹಾಕೋಕೆ ಶುರುಮಾಡಿದೆ ಎ೦ದು ಎಲ್ಲರೂ ಕೂಗಿದೆವು. (ಏನೊ ನಮ್ಮ ಸಾರಥಿಯಿ೦ದಲೇ ಲೇಟಾಗಿದೆ ಎನ್ನುವ೦ತೆ).

ಅವರು ಮು೦ದೆ ಹೋಗುತ್ತಿದ್ದ೦ತೆ, ನಾವೆಲ್ಲರೂ ಒಬ್ಬರ ಹಿ೦ದೆ ಒಬ್ಬರ೦ತೆ ಸಾಲಾಗಿ ಒಳ ಹೋದೆವು.


ಅ೦ತೂ ಇ೦ತೂ ನಮ್ಮ ಸಾರಥಿಯೊಡನೆ, ನಾವು ನವಗ್ರಹಗಳೂ ಸುಮನಾಳ ಗೃಹ ಪ್ರವೇಶ ಮಾಡಿದೆವು.