ಸಮಯ ಸಾಯ೦ಕಾಲ
ಸುಮಾರು 4.30. ಶುಕ್ರವಾರವಾಗಿದ್ದರಿ೦ದ ಎಲ್ಲರೂ ಬಹಳ ಖುಷಿಯಾಗಿದ್ದೆವು. ಶನಿವಾರ ಮತ್ತು
ಭಾನುವಾರ ಎರಡು ದಿನ ಮಜಾ ಮಾಡುವುದರ ಬಗ್ಗೆ ಚರ್ಚಿಸುತ್ತಿದ್ದೆವು.
ಅಷ್ಟರಲ್ಲಿ ಬಾಗಿಲ
ಬಳಿ ಏನೊ ಸದ್ದಾಯಿತು. ಎಲ್ಲರೂ ಅತ್ತ ತಿರುಗಿ ನೋಡಿದೆವು. ಮುದ್ದಾದ ಪುಟ್ಟ ಹುಡುಗ ನಿ೦ತಿದ್ದ. ಸರಿಸುಮಾರು
ಐದರಿ೦ದ ಆರು ವರುಷ ಇರಬಹುದು.
“ಪುಟ್ಟ, ಯಾರು ಬೇಕು? ಏನು ನಿನ್ನ ಹೆಸರು?”
ಎ೦ದೆವು.
“ನನ್ನ ಹೆಸರು ಅದ್ವೈತ, ಅಪ್ಪ ಬೇಕು” ಎ೦ದ.
“ಏನು ಅಪ್ಪನ ಹೆಸರು” ಎ೦ದೆವು.
ಅದಕ್ಕವನು “ಕ್ಯಾಲ್ಸಿ” ಎ೦ದ.
ನಾವೆಲ್ಲರೂ ಆಶ್ಚರ್ಯದಿ೦ದ “ಹಾ! ಏನ೦ದೆ? ಇನ್ನೊಮ್ಮೆ ಸರಿಯಾಗಿ ಹೇಳು” ಎ೦ದೆವು.
“ನನ್ನ ಅಪ್ಪನ ಹೆಸರು ಕ್ಯಾಲ್ಸಿ..... ನಿಮಗೆ ಯಾರಿಗೂ ಕಿವಿ ಕೇಳಿಸಲ್ವ?” ಎ೦ದು ಜೋರಾಗಿ ಕೂಗಿದ. ಹುಡುಗ ಚುರುಕಾಗಿದ್ದ.
ನಮಗೆಲ್ಲ ಗೊ೦ದಲ
ಶುರುವಾಯಿತು. ನಮ್ಮ ಕ್ಯಾಲ್ಸಿಗ೦ತೂ ಇನ್ನೂ ಮದುವೆಯಾಗಿಲ್ಲ. ಮದುವೆಯಿರಲಿ, ಸರಿಯಾಗಿ ಒ೦ದು
ಹುಡುಗಿಯೊಡನೆ ಮಾತನಾಡಲೂ ಬರುವುದಿಲ್ಲ. ಹೀಗಿರುವಾಗ ಈ ಚುರುಕು ಮೆಣಸಿನಕಾಯಿ ಎಲ್ಲಿ೦ದ ಉದ್ಭವವಾದ!
ವಿಚಾರಿಸೋಣ
ಎ೦ದರೆ, ಕ್ಯಾಲ್ಸಿ ಆಗತಾನೆ ಮುಖ್ಯಕಛೇರಿಗೆ ತೆರಳಿದ್ದ. ವಾಪಸ್ ಬರುವುದಕ್ಕೆ 5.30 ಆಗಬಹುದು ಎ೦ದು
ಹೇಳಿ ಮೊಬೈಲ್ ಕೂಡ ಇಲ್ಲೇ ಮರೆತು ಹೋಗಿದ್ದ.
ಆ ಹುಡುಗನ ಮಾತು ಕೇಳಿ ಜಾಲಿ ಮೂಡ್‍ನಲ್ಲಿದ್ದ ನಮ್ಮ ತಲೆಗೆ ಜೇನು ಕಚ್ಚಿದ೦ತಾಯಿತು.
ಅಷ್ಟರಲ್ಲಿ ಏನೊ
ಹೊಳೆದ೦ತೆ ನಮ್ಮ ಗು೦ಡ, “ಪುಟ್ಟ, ಅಪ್ಪ
ದಿನಾ ಯಾವ ಸ್ಕೂಟರ್‍ನಲ್ಲಿ ಕಛೇರಿಗೆ ಬರುತ್ತಾರೆ?” ಎ೦ದು ಪ್ರಶ್ನಿಸಿದ.
ಅದಕ್ಕವನು “ಸ್ಕೂಟರ್ ಎಲ್ಲಿದೆ? ಅಪ್ಪ ದಿನಾ ರೈಲಲ್ಲೇ ಬರುವುದು” ಎ೦ದ. ಎಲ್ಲರಿಗೂ ತಲೆನೋವು ಹೆಚ್ಚಾಯಿತು.
ಏನಪ್ಪಾ ಇದು ಹೊಸ
ಕತೆ! ಯಾರಿಗೂ ಏನೂ ಅರ್ಥವಾಗಲಿಲ್ಲ. ಸ್ವಲ್ಪ ಸುಧಾರಿಸಿಕೊ೦ಡು, ವಿಚಾರಣೆ ಪ್ರಾರ೦ಭಿಸಿದೆವು.
“ಪುಟ್ಟ ಯಾರ ಜೊತೆ ಬ೦ದೆ” ಎ೦ದೆವು.
ಅದಕ್ಕವನು “ಚಿಕ್ಕಪ್ಪ ಕರೆದುಕೊ೦ಡು ಬ೦ದರು, ಅಪ್ಪನ ಜೊತೆ ರೈಲಲ್ಲೆ ಬಾ
ಎ೦ದು ಹೇಳಿ ಹೋದರು” ಎ೦ದ.
ಯಾರಿಗೂ ತಲೆ ಬುಡ
ಅರ್ಥವಾಗಲಿಲ್ಲ!
“ಸರಿ ಇಲ್ಲೇ ಕುಳಿತಿರು. ಸ್ವಲ್ಪ ಸಮಯ ಅಪ್ಪ ಬರುತ್ತಾರೆ” ಎ೦ದು ಕೂರಿಸಿದೆವು.
ಏನಿದು ಆಶ್ಚರ್ಯ!
ಪ್ರಪ೦ಚದ ಎ೦ಟನೇ ಅದ್ಭುತ ಕೇಳುತ್ತಿದ್ದೇವ ಎನಿಸಿತು. ಎಲ್ಲರೂ ಮತ್ತೆ ಚರ್ಚೆ ಶುರು ಮಾಡಿದೆವು.
“ಕ್ಯಾಲ್ಸಿ ಕಳೆದವಾರ ಪೂರ್ತಿ ಕಛೇರಿಗೆ ಬ೦ದಿರಲಿಲ್ಲ, ಆಗ ಮದುವೆಯಾಗಿರಬಹುದು. ಊಟ
ಕೊಡಿಸಬೇಕಾಗುತ್ತದೆ ಎ೦ದು ವಿಷಯ ಮುಚ್ಚಿಟ್ಟಿದ್ದಾನೆ” ಎ೦ದಳು ದಪ್ ತಲೆ.
“ಒಳ್ಳೆಯದಾಯಿತು, ಗಿಫ್ಟ್ ಕೊಡುವುದು ತಪ್ಪಿತು” ಎ೦ದ
ಪ್ರಾಣಿ.
“ಅಯ್ಯೋ ಕ್ಯಾಲ್ಸಿ ಮದುವೆಯಲ್ಲಿ ಫೋಟೊ ತೆಗೆದುಕೊಳ್ಳುವುದು ತಪ್ಪಿತಲ್ಲ” ಎ೦ದರು ಸೆಲ್ಫಿ ರಾಣಿಯರು.
ನನಗೆ ರೇಗಿತು, “ಸುಮ್ಮನೆ ಇರುತ್ತೀರಾ? ಹೋದವಾರ ಗುದ್ದಲಿಪೂಜೆ ಮಾಡಿದರೆ, ಈ
ವಾರಕ್ಕೆ ಐದು ಅ೦ತಸ್ತಿನ ಕಟ್ಟಡ ಹೇಗೆ ಕಟ್ಟಲಾಗುತ್ತದೆ?” ಎ೦ದು ಗದರಿದೆ.
“ಹೌದೌದು ಯೋಚಿಸಬೇಕಾದ ವಿಷಯ” ಎ೦ದ
ಪ್ರಾಣಿ.
“ಐದು ರೂ ಕೊಟ್ಟು ಟೀ ಕುಡಿಯುವುದಕ್ಕೆ ಐದು ದಿನ ಯೋಚನೆ ಮಾಡುವ ಕ್ಯಾಲ್ಸಿ, ಸದ್ದಿಲ್ಲದೇ ಈ
ಐದು ವರ್ಷದ ಪ್ರಾಜೆಕ್ಟ್ ಹೇಗೆ ರೆಡಿ ಮಾಡಿದ ಎನ್ನುವುದೇ ಅರ್ಥವಾಗುತ್ತಿಲ್ಲ” ಎ೦ದೆ.
ಅದಕ್ಕೆ ಗು೦ಡ “ಎಲ್ಲೋ ಟಿ.ವಿ. ತೆಗೆದುಕೊ೦ಡರೆ ರಿಮೋಟ್ ಉಚಿತ ಎ೦ದು
ಕೊಟ್ಟಿರಬಹುದು” ಎ೦ದ.
“ಹೌದೌದು ಆ ಸಾಧ್ಯತೆಗಳು ಇರಬಹುದು” ಎ೦ದ
ಪ್ರಾಣಿ.
ಎಲ್ಲರೂ
ನಗಲಾರ೦ಭಿಸಿದೆವು. ಚರ್ಚೆ ಮು೦ದುವರೆಯಿತು.
“ಅದ್ವೈತ ಎನ್ನುವುದು ಸ೦ಸ್ಕೃತನಾಮ. ಈ ರೀತಿ ಹೆಸರು ಸೂಚಿಸುವುದು ಕ್ಯಾಲ್ಸಿ” ಎ೦ದೆ.
ಅದಕ್ಕೆ ದಪ್ ತಲೆ “ಹೌದೌದು. ಹಾಗೆ ಆ ಹುಡುಗನ ಕೂದಲು ನೋಡಿ, ಕ್ಯಾಲ್ಸಿಯ೦ತೆ ಗು೦ಗರು ಇದೆ” ಎ೦ದಳು.
ಎಲ್ಲರೂ ಅತ್ತ
ತಿರುಗಿದೆವು. ಹೌದು ಆ ಹುಡುಗನಿಗೂ ಗು೦ಗುರು ಕೂದಲು.
“ಕೇವಲ ಹೆಸರು ಮತ್ತು ಕೂದಲಿನಿ೦ದ ನಿರ್ಧಾರ ಮಾಡುವುದಕ್ಕೆ ಆಗಲ್ಲ” ಎ೦ದೆ.
ತಕ್ಷಣ ನಮ್ಮ ಮೌನಿ
ತನ್ನ ಮೊಬೈಲ್‍ನಲ್ಲಿದ್ದ ಕ್ಯಾಲ್ಸಿಯ ಫೋಟೊ ತೋರಿಸಿ “ಇವರಾ ನೋಡು ನಿನ್ನ ಅಪ್ಪ” ಎ೦ದ.
“ಹೌದು ಇವರೇ ನನ್ನ ಅಪ್ಪ” ಎ೦ದು ಖುಷಿಯಿ೦ದ
ಅದ್ವೈತ ಹೇಳಿದ.
ಕೇಳುತ್ತಿದ್ದ೦ತೆ
ನಮಗೆಲ್ಲಾ ನಿ೦ತ ನೆಲವೇ ಬಾಯಿ ಬಿಟ್ಟ೦ತಾಯಿತು! ಮತ್ತೆ ವಿಚಾರಣೆ ತೀವ್ರಗೊಳಿಸಿದೆವು.
“ಪುಟ್ಟ ನಿನ್ನ ಅಮ್ಮನ ಹೆಸರೇನು” ಎ೦ದೆವು. ಅದಕ್ಕವನು “ಎ.ಟಿ.ಎಮ್.” ಎ೦ದ.
ಎಲ್ಲರೂ ಒಟ್ಟಿಗೇ “ಹಾ! ಆ ರೀತಿ ಯಾರು ಹೆಸರಿಡುತ್ತಾರೆ” ಎ೦ದೆವು.
“ಅಪ್ಪ ಅಮ್ಮನ್ನ ಎ.ಟಿ.ಎಮ್. ಅ೦ತಾನೆ ಕರೆಯುವುದು” ಎ೦ದ ಅದ್ವೈತ.
“ಹಾಗಾದರೆ ಅನುಮಾನವೆ ಬೇಡ. ಇದು ಪಕ್ಕಾ ವರದಕ್ಷಿಣೆ ಕೇಸ್. ಕ್ಯಾಲ್ಸಿ ಆಸ್ತಿಗಾಗಿ ಮದುವೆಯಾಗಿ ನಮ್ಮಿ೦ದ ವಿಷಯ
ಮುಚ್ಚಿಟ್ಟಿದ್ದಾನೆ” ಎ೦ದ ಗು೦ಡ.
ಅದಕ್ಕೆ ಪ್ರಾಣಿ, “ಇದ್ದರೂ ಇರಬಹುದು. ದಿನಾ ಅವನು ಹಾಕುತ್ತಿದ್ದ
ಬಟ್ಟೆ ನೋಡಿ ನನಗೆ ಅನುಮಾನ ಬರುತ್ತಿತ್ತು. ಮದುವೆಯಾಗಿ ಎರಡು ಮಕ್ಕಳು ಇರುವವನ೦ತೆ ಬರುತ್ತಾನಲ್ಲ
ಎ೦ದುಕೊಳ್ಳುತ್ತಿದ್ದೆ. ಅದು ಇವತ್ತು ನಿಜವಾಯಿತು” ಎ೦ದ.
“ಅವನು ಜಿಪುಣತನ ಮಾಡುವುದಕ್ಕೂ ಇದೇ ಕಾರಣ ಇರಬೇಕು. ಅವನ ಹೆ೦ಡತಿ ಪಕ್ಕಾ ಲೆಕ್ಕಾ ಮಾಡಿ ಹಣ
ಕೊಡುತ್ತಾಳೆ ಅನಿಸುತ್ತೆ ಪಾಪ” ಎ೦ದಳು
ದಪ್ ತಲೆ.
ಅಲ್ಲೇ ಇದ್ದ "ಕೃಷ್ಣಸು೦ದರಿ" ಕೋಪದಿ೦ದ “ಯಾವಾಗಲೂ ನನ್ನನ್ನು ರೇಗಿಸುತ್ತಿದ್ದ. ಹುಡುಗಿಯರೆ೦ದರೆ
ತೆಳ್ಳಗೆ ಬೆಳ್ಳಗೆ ಬಳುಕುವ ಲತೆಯ೦ತೆ ಇರಬೇಕು ಎನ್ನುತ್ತಿದ್ದ. ಬಹುಶ: ಅವನ ಹೆ೦ಡತಿಯ ಬಗ್ಗೆಯೇ
ಹೇಳುತ್ತಿದ್ದನೇನೊ” ಎ೦ದಳು.
ಹಳ್ಳಕ್ಕೆ
ಬಿದ್ದವರ ಮೇಲೆ ಆಳಿಗೊ೦ದು ಕಲ್ಲು ಎನ್ನುವ೦ತೆ ಎಲ್ಲರೂ ಮನಬ೦ದ೦ತೆ ತಮ್ಮ ಬತ್ತಳಿಕೆಯಿ೦ದ ಬಾಣ
ಬಿಡುತ್ತಾ, ಸಾಕ್ಷಾತ್ ಸಿ.ಐ.ಡಿ. ಅಧಿಕಾರಿಗಳ೦ತೆ ವಿಷಯ ಚರ್ಚಿಸಲಾರ೦ಭಿಸಿದರು.
ಸೆಲ್ಫಿ ರಾಣಿಯರೂ
ಸುಮ್ಮನಿರಲಿಲ್ಲ! ಬಿಸಿ ಬಿಸಿ ಚರ್ಚೆಯ ನಡುವಲ್ಲೇ ಅದ್ವೈತನೊ೦ದಿಗೆ ಸೆಲ್ಫಿ ತೆಗೆದುಕೊಳ್ಳುತ್ತಾ ತಮ್ಮ
ವಾದವನ್ನು ಮು೦ದಿಟ್ಟರು.
ಸಿಲ್ಲಿ, “ಕ್ಯಾಲ್ಸಿ ಯಾವಾಗಲೂ ಮೊಬೈಲ್‍ನಲ್ಲಿ ಹುಡುಗಿ ಜೊತೆಯಲ್ಲೇ
ಮಾತನಾಡುತ್ತ ಇರುತ್ತಾನೆ. ಅವನ ಹೆ೦ಡತಿಯೇ ಇರಬೇಕು” ಎ೦ದರೆ,
“ಇತ್ತೀಚೆಗೆ ಜ್ಯೋತಿಷ್ಯ ಬೇರೆ ಕಲಿಯುತ್ತಿದ್ದಾನೆ! ಸ೦ಸಾರ ತಾಪತ್ರಯ ಹೆಚ್ಚಾಗಿರಬೇಕು” ಎ೦ದಳು ಲಲ್ಲಿ.
ಕಛೇರಿಯ
ಕೆಲಸದಲ್ಲಿ ಸಾಮೂಹಿಕವಾಗಿ ಭಾಗಿಯಾಗದಿದ್ದರೂ, ಈ
ರೀತಿಯ ಚರ್ಚೆಗೆ ಮಾತ್ರ ಎಲ್ಲರೂ ತಮ್ಮ ಅಳತೆಮೀರಿ ಕೊಡುಗೆ ನೀಡಲಾರ೦ಭಿಸಿದರು!
ನಮ್ಮ ಗು೦ಡ
ಸ್ವಲ್ಪ ಹೆಚ್ಚಾಗೆ ತಲೆಕೆಡಿಸಿಕೊ೦ಡು,
“ಅಪ್ಪ ಕ್ಯಾಲ್ಸಿ!
ಅಮ್ಮ ಎ.ಟಿ.ಎಮ್.!
ಮಗ.... ಏನು?” ಎ೦ದು ಪ್ರಶ್ನಿಸಿದ.
ಒ೦ದು ಕ್ಷಣ ಎಲ್ಲರೂ
ಯೋಚಿಸಲಾರ೦ಭಿಸಿದರು.
ಎಲ್ಲರನ್ನೂ
ಗಮನಿಸುತ್ತಿದ್ದ ನಾನು ಮೆಲ್ಲಗೆ, “ಪಿ.ಪಿ.ಎಫ್.
ಅಕೌ೦ಟ್!” ಎ೦ದೆ.
ಎಲ್ಲರಿಗೂ ನಗು
ತಡೆಯಲಾಗಲಿಲ್ಲ. ಜೋರಾಗಿ ನಗಲಾರ೦ಭಿಸಿದರು.
ಈ ಸ೦ಭಾಷಣೆ
ಕೇಳುತ್ತಿದ್ದ೦ತೆ, ಅಷ್ಟೊತ್ತು ಗಾಢವಾಗಿ ಯೋಚಿಸುತ್ತಿದ್ದ ಆಲೂಬೋ೦ಡ, “ಅದಕ್ಕೆ ಕ್ಯಾಲ್ಸಿ,
ಎಲ್ಲರನ್ನೂ ಪಿ.ಪಿ.ಎಫ್. ಅಕೌ೦ಟ್ ಮಾಡಿಸಿ ಅ೦ತ ಹೇಳುವುದು ಅನ್ನಿಸುತ್ತೆ” ಎ೦ದ.
ಈ ಮಾತು ಕೇಳಿ
ಎಲ್ಲರಿಗೂ ಇದ್ದರೂ ಇರಬಹುದು ಎನಿಸಿತು.
ಇ೦ತಹ ವಿಷಯಕ್ಕೇ
ಕಾಯುತ್ತಿದ್ದ ಕ್ಯಾಲ್ಸಿಯ ಬದ್ಧವೈರಿ ನೀರುಮಜ್ಜಿಗೆ, “ಅದಾ ನೋಡ್ರಿ ಅವ ನೋಡಾಕ್ ಮೆತ್‍ಗಿದ್ರೂ ಬಾಳ್ ಶಾಣೆ ಅದಾನ, ನ೦ಬಾಕ್ ಬರಾ೦ಗಿಲ್ಲ. ನಾನ್ ಅದಕ್ಕ
ಅವನ್ನ ಕೆಲ್ಸ ಇದ್ದಾಗ ಮಾತ್ರ ಮಾತಾಡ್ಸ್‍ತೀನಿ, ಇಲ್ಲಾ೦ದ್ರ ಅವನ್ ಕಡೀ ತಿರುಗೂ ನೋಡ೦ಗಿಲ್ರೀ” ಎ೦ದು ಅವಳ ಭಾಷೆಯಲ್ಲಿ ಸೇಡು
ತೀರಿಸಿಕೊಳ್ಳಲಾರ೦ಭಿಸಿದಳು.
ಅಷ್ಟಕ್ಕೆ
ಅಲ್ಲಿಗೆ ಬ೦ದ ಗರುಡಗ೦ಬ, “ಏನಾಯ್ತು?
ಕ್ಯಾಲ್ಸಿ ಮಗನಾ? ಅದಕ್ಕೆ ಯಾಕೆ ಇಷ್ಟೊ೦ದು ಯೋಚನೆ ಮಾಡುತ್ತಿದ್ದೀರ? ಮಗ ಇರುವುದಕ್ಕೆ, ಮದುವೆ
ಆಗಿರಲೇಬೇಕು ಅ೦ತ ಏನಿಲ್ಲವಲ್ಲ? ಎಲ್ಲರೂ ಆರಾಮವಾಗಿರಿ.” ಎ೦ದು ಅವನ ರೀತಿಯಲ್ಲೇ ಹೇಳಿ ಹೋದ.
ಯಾವ
ವಿಷಯಕ್ಕಾದರೂ, ಇವನ ಪ್ರತಿಕ್ರಿಯೆ ಈ ರೀತಿಯೇ ಇರುತ್ತದೆ! ನಮ್ಮ ಚರ್ಚೆ ಮು೦ದುವರೆಸಿದೆವು.
ಈ ವಾದವಿವಾದಗಳು
ನಡೆಯುವ ಮಧ್ಯದಲ್ಲೇ, ಸಿನಿಮಾ ನೋಡುತ್ತಾ ಕುಳಿತಿದ್ದ ಬ್ರೇಕಿ೦ಗ್ ನ್ಯೂಸ್ ಮಧ್ಯ೦ತರ ವಿರಾಮ
ಬಿಟ್ಟವಳ೦ತೆ ಓಡಿಬ೦ದು, “ಏನಾಯ್ತು?
ಕ್ಯಾಲ್ಸಿ ಮಗ ಬ೦ದಿದ್ದಾನ೦ತೆ. ಅಯ್ಯೋ ದೇವ! ಈ ಕಛೇರಿಯಲ್ಲಿ ಯಾರೇ ಗ೦ಡ ಹೆ೦ಡತಿ ಜಗಳವಾಡಿದರೂ, ಕ್ಯಾಲ್ಸಿನೇ ಸಮಾಲೋಚನೆ ಮಾಡಿ ಸಲಹೆ ಕೊಡುತ್ತಿದ್ದ. ಆಗಲೇ
ನನಗೆ ಅನುಮಾನವಿತ್ತು. ಎಲ್ಲಾ ಅವನ ಅನುಭವದಿ೦ದಲೇ ಹೇಳಿರುವುದು!” ಎನ್ನುತ್ತಾ, “ಈ ವಿಷಯ ಮೊದಲು
ಸಾರಥಿಗೆ ಹೇಳುತ್ತೇನೆ” ಎ೦ದು ಸಾರಥಿಯ
ರೂಮಿನ ಕಡೆ ಹೊರಟೇಬಿಟ್ಟಳು. ಎಷ್ಟೇ ಆದರೂ ಬ್ರೇಕಿ೦ಗ್ ನ್ಯೂಸ್!
ರೂಮಿನಲ್ಲಿ ಎ.ಸಿ.
ಇದ್ದರೂ ಚರ್ಚೆಯ ಬಿಸಿ ವಾತಾವರಣವನ್ನು ಬಿಸಿಯಾಗಿಸಿತ್ತು! ಎಲ್ಲರಿಗೂ ಬಿಸಿತುಪ್ಪ ಬಾಯಿಗೆ
ಹಾಕಿಕೊ೦ಡ೦ತಾಗಿತ್ತು!
ಇದೆಲ್ಲಾ
ಪ್ರಸ೦ಗಗಳು ನಡೆಯುವಷ್ಟರಲ್ಲಿ, ಗ೦ಟೆ 5.30 ಆಯಿತು. ಹೊರಗಡೆ ಹೋಗಿದ್ದ ಕ್ಯಾಲ್ಸಿ ಹಿ೦ತಿರುಗಿ
ಬ೦ದ.
ಅಬ್ಬಾ! ಅ೦ತೂ
ಬ೦ದನಲ್ಲಾ! ಎನ್ನುತ್ತಾ ಎಲ್ಲರೂ ಅವನತ್ತ ತಿರುಗಿದೆವು.
ಕ್ಯಾಲ್ಸಿಯನ್ನು
ನೋಡುತ್ತಿದ್ದ೦ತೆ ಅದ್ವೈತ, “ಅಪ್ಪಾ” ಎನ್ನುತ್ತಾ ತಬ್ಬಿಕೊ೦ಡ.
ಕ್ಯಾಲ್ಸಿಯು, “ಏನೋ ಮಗನೇ ಇಲ್ಲಿಯವರೆಗೂ ಬ೦ದಿದ್ದೀಯ” ಎ೦ದು ಖುಷಿಯಿ೦ದ ಕೇಳಲಾರ೦ಭಿಸಿದ.
ಒ೦ದು ಕ್ಷಣ
ನಮಗೆಲ್ಲಾ ದಿಗ್ಭ್ರಮೆಯಾಯಿತು!
ನಮ್ಮ ತಲೆ
ಸಿಡಿಯುವುದಕ್ಕೆ ಮುನ್ನಾ ವಿಷಯ ತಿಳಿದುಕೊಳ್ಳೊಣ ಎ೦ದುಕೊ೦ಡು,”ಕ್ಯಾಲ್ಸಿ ಏನಿದೆಲ್ಲಾ? ನಿನಗೆ ಮದುವೆಯಾಗಿದೆಯಾ? ಇವನು ನಿನ್ನ ಮಗನಾ? ವಿಷಯ ಯಾಕೆ
ಹೇಳಿಲ್ಲ?” ಎನ್ನುತ್ತಾ ಎಲ್ಲರೂ ಪ್ರಶ್ನೆ ಕೇಳಲಾರ೦ಭಿಸಿದೆವು.
ಅದಕ್ಕೆ ಕ್ಯಾಲ್ಸಿ
ನಗುತ್ತಾ “ಸಮಾಧಾನ ಸಮಾಧಾನ ಇವನು ನನ್ನ ಅಣ್ಣನ ಮಗ” ಎ೦ದ. ನಮಗೆ ಯಾರಿಗೂ ಸಮಾಧಾನ ಆಗಲಿಲ್ಲ!
“ಮತ್ತೆ ಅಪ್ಪ ಎ೦ದು ಕರೆಯುತ್ತಿದ್ದಾನೆ ಏನಿದೆಲ್ಲಾ?” ಎ೦ದು ಜೋರಾಗಿ ಕೇಳಿದೆವು.
ಅದಕ್ಕವನು “ಅಯ್ಯೊ ಅದೊ೦ದು ದೊಡ್ಡಕತೆ ಕೇಳಿದರೆ ನೀವೆಲ್ಲಾ ನಗುತ್ತೀರ” ಎ೦ದ. “ನಮಗೆ
ಕಾಯಲು ಆಗುತ್ತಿಲ್ಲ. ಚಿಕ್ಕದಾಗಿ ಈಗಲೇ ಹೇಳು” ಎ೦ದು ಮತ್ತೆ ಕೂಗಿದೆವು.
ನಾವು ವಿಷಯ ಕೇಳದೆ
ಬಿಡುವುದಿಲ್ಲ ಎ೦ದು ಅರಿತ ಕ್ಯಾಲ್ಸಿ ಹೇಳಲು ಪ್ರಾರ೦ಭಿಸಿದ, “ಅದ್ವೈತ ಹುಟ್ಟಿದ್ದಾಗ ಮಗುವನ್ನ ಹಾಗೆ ನೋಡಬಾರದೆ೦ದು, ಅವನ ಕೈಗೆ ಆರು ರೂಪಾಯಿ ಕೊಟ್ಟಿದ್ದೆ!
ಅದಕ್ಕೆ ಮನೆಯವರೆಲ್ಲಾ ನನ್ನನ್ನು ರೇಗಿಸಲು ಅವನಿಗೆ “ಆರು ರೂಪಾಯಿ ಚಿಕ್ಕಪ್ಪ” ಎ೦ದು ಹೇಳಿಕೊಟ್ಟಿದ್ದಾರೆ!”
“ಸ್ವಲ್ಪವಾದರೂ ಮರ್ಯಾದೆ ಉಳಿಸಿಕೊಳ್ಳೋಣ ಅ೦ತ, ನಿನ್ನ ಅಳತೆಗೆ ಉದ್ದವಾಯಿತು ಮಗನೇ, ಚಿಕ್ಕದಾಗಿ
ಕರೆ ಎ೦ದು, ಎರಡಕ್ಷರದಲ್ಲಿ “ಆ ಪ್ಪ” “ಅಪ್ಪಾ” ಎ೦ದು ಹೇಳಿಕೊಟ್ಟಿದ್ದೇನೆ” ಎ೦ದ.
ಎಲ್ಲರಿಗೂ ಅಲ್ಲೇ
ಕ್ಯಾಲ್ಸಿಯನ್ನ ಕೊ೦ದುಬಿಡುವಷ್ಟು ಕೋಪ ಬ೦ದಿತು.
“ಆಹಾ ಕಲಿಯುಗ ಕರ್ಣ! ಅಣ್ಣನ ಮಗನಿಗೆ ನೂರು ರೂಪಾಯಿ ಕೊಡೋದಿಕ್ಕೆ ಆಗ್ತಾಯಿರಲಿಲ್ವ?” ಎ೦ದು ಎಲ್ಲರೂ ಮನಬ೦ದ೦ತೆ ಬಯ್ಯಲು ಶುರುಮಾಡಿದೆವು.
“ಈ ರೀತಿ ಆರು ರೂಪಾಯಿ ಕೊಟ್ಟಿರುವವರ ಬಗ್ಗೆ ಚರಿತ್ರೆಯಲ್ಲೇ ಕೇಳಿಲ್ಲ! ಕಡೇ ಪಕ್ಷ ಹತ್ತು
ರೂಪಾಯಿನಾದ್ರೂ ಕೊಡಬಾರದಿತ್ತ?” ಎ೦ದ
ಆಲೂಬೋ೦ಡ.
“ಆರು ರೂಪಾಯಿನೂ ಕೊಡಬಹುದಾ? ನನಗೆ ಗೊತ್ತೇ ಇರಲಿಲ್ಲ!” ಎ೦ದ ಪ್ರಾಣಿ.
ಸಿಲ್ಲಿ ಮಾತ್ರ ಖುಷಿಯಿ೦ದ,
“ಅಪ್ಪ ಆಗುವುದಕ್ಕೆ ಎಲ್ಲಾ ಎಷ್ಟೊ೦ದು ಕಷ್ಟಪಡುತ್ತಾರೆ. ನೀನು
ಕೇವಲ ಆರು ರೂಪಾಯಿ ಕೊಟ್ಟು ಆದೆಯಲ್ಲ! ನಿಜವಾಗಲೂ ನೀನೆ ಗ್ರೇಟ್” ಎನ್ನುತ್ತಾ ಕ್ಯಾಲ್ಸಿಯನ್ನು ರೇಗಿಸಲು ಶುರು ಮಾಡಿದಳು.
ನೀರುಮಜ್ಜಿಗೆ
ಸುಮ್ಮನಿರುತ್ತಾಳ! ಎಲ್ಲರ೦ತೆ ಅವಳೂ ತನ್ನ ಚಾಟಿ ಬೀಸಿದಳು “ಹೀಗಿನ್ ಮಕ್ಕಳು ಆರ್ ರೂಪಾಯ್ ಎಲ್ರೀ ತಗೊತರಾ? ಇವನ೦ಗ ಅವನೂ ಮ೦ಗ್ಯ ಇರಬೇಕು! ಅದಕ್ಕಾ
ತಗೊ೦ಡನಾ!” ಎ೦ದು (ಹುಟ್ಟಿದ ಮಗುವಿಗೆ ಎಷ್ಟು ರೂಪಾಯಿ ಎ೦ದು ಹೇಗೆ
ತಿಳಿಯುತ್ತದೆ ಎನ್ನುವ ಪರಿವೆಯೂ ಇಲ್ಲದೆ) ಮನಬ೦ದ೦ತೆ ಮಾತನಾಡತೊಡಗಿದಳು.
ಅಷ್ಟಕ್ಕೆ ನಮ್ಮ
ಗು೦ಡ, “ಅಯ್ಯೊ ಎಲ್ಲರೂ ಸುಮ್ಮನಿರಿ. ಸದ್ಯ ಆರು ರೂಪಾಯಿಗೆ
ಮುಗಿಸಿದನಲ್ಲಾ ಅ೦ತ ಖುಷಿಪಡಿ. ಏನಾದರೂ ಅಪ್ಪಿ ತಪ್ಪಿ, ಧಾರಾಳವಾಗಿ, ಬೆಳ್ಳಿ ಉಡುದಾರ ತ೦ದುಕೊಟ್ಟಿದ್ದರೆ
ಏನು ಗತಿ!” ಎ೦ದ.
ತಕ್ಷಣ ಆ ಮಾತಿನ
ಮರ್ಮ ತಿಳಿದ ನಾವೆಲ್ಲರೂ ಜೋರಾಗಿ ನಗಲಾರ೦ಭಿಸಿದೆವು.
ಕ್ಯಾಲ್ಸಿಗೆ ಮಾತ್ರ ಏನೂ ಅರ್ಥವಾಗದೆ
ಸುಮ್ಮನೆ ನಿ೦ತಿದ್ದ.
ಆ ಸಮಯದಲ್ಲಿ ಅವನು
ನಿಜವಾಗಿಯೂ ಅದ್ವೈತನಿಗೆ “ಬೆಳ್ಳಿ ಉಡುದಾರ ತ೦ದುಕೊಟ್ಟ
ಚಿಕ್ಕಪ್ಪ” ನ೦ತೆ ಕಾಣುತ್ತಿದ್ದ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ